ಶಿವಮೊಗ್ಗ: ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸವಿದೆ. ಚುನಾವಣೆ ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಚುನಾವಣೆ ಅನೇಕ ವಿಶೇಷತೆಗಳಿಂದ ಕೂಡಿತ್ತು. ವಿಕಸಿತ ಭಾರತಕ್ಕೋಸ್ಕರ ಮತದಾನ ಮಾಡಿದ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಒಂದು ದಶಕದಿಂದ ಇಡೀ ವಿಶ್ವವೇ ಬೆರಗಾಗುವಂತೆ ದೇಶಕ್ಕೆ ಶಕ್ತಿಯುತ ಹಾಗೂ ಅಭಿವೃದ್ಧಿ ಮಾಡಿ ವಿಶ್ವಕೇಂದ್ರವನ್ನಾಗಿ ಮಾಡಲು ಮತ್ತೊಮ್ಮೆ ಮೋದಿ ಸರ್ಕಾರ ಘೋಷಣೆಯಡಿ ಸಹಕಾರ ನೀಡಲು ಕೈ ಜೋಡಿಸಿದ್ದಕ್ಕಾಗಿ ಮತ್ತೊಮ್ಮೆ ಮತದಾರರಿಗೆ ಕೃತಜ್ಞತೆಗಳು ಎಂದರು.
ಭಾರತದ ಏಳಿಗೆಗೆ ಶ್ರಮ ವಹಿಸಿದ ಸಂಘಟನೆ ಕಾರ್ಯಕರ್ತರಿಗೆ ಅಭಿನಂದನೆಗಳು. 1952ರಿಂದ 2024ರವರೆಗೆ ಒಟ್ಟು 18 ಬಾರಿ ಲೋಕಸಭೆ ಚುನಾವಣೆಗಳು ನಡೆದಿದ್ದು 1952ರಲ್ಲಿ ಶೇ. 75.14 ರಷ್ಟು ಮತದಾನವಾಗಿದ್ದನ್ನು ಬಿಟ್ಟರೆ 2024ರ ಚುನಾವಣೆಯಲ್ಲಿ ಶೇ. 78.31ರಷ್ಟು ಮತದಾನವಾಗಿರುವುದು ದಾಖಲೆಯಾಗಿದೆ ಎಂದರು.
ಶಾಂತಿಯುತವಾಗಿ ಮತದಾನವಾಗಲು ಕಾರ್ಯಕರ್ತರು ಸಂಘಟನಾತ್ಮಕವಾಗಿ ಹಾಗೂ ಕುಟುಂಬದ ರೀತಿಯಲ್ಲಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ. ಅದೇ ರೀತಿ ಮೈತ್ರಿಕೂಟದ ಜೆಡಿಎಸ್ ಪಕ್ಷದ ಶ್ರಮ, ಕೆಲವು ಎನ್.ಜಿ.ಒ.ಗಳು ಸಹ ಕೈಜೋಡಿಸಿವೆ. ಹೊರ ದೇಶ, ವಿವಿಧ ರಾಜ್ಯಗಳು ಹಾಗೂ ರಾಜ್ಯದ ವಿವಿಧೆಡೆ ನೆಲೆಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ಸಹ ಮತದಾನ ಮಾಡಿರುವುದರಿಂದ ಶೇಕಡವಾರು ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಈಶ್ವರಪ್ಪನವರು ನೆನ್ನೆ ನನ್ನ ಬಗ್ಗೆ ದೂರು ನೀಡಿದ ವಿಷಯ ತಿಳಿಯಿತು. ನಾನು ಆಗ ಆನಂದಪುರದಲ್ಲಿದ್ದೆ ನನಗೆ ಆಶ್ಚರ್ಯವಾಯಿತು. ಇದನ್ನು ನಾನು ಕೂಡಲೇ ಪರಿಶೀಲನೆ ಮಾಡಿದೆ, ಇದು ಸುಳ್ಳು ಸುದ್ಧಿಯಾಗಿದ್ದು, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ನಿರಾಧರವಾದ ಆರೋಪವಾಗಿದೆ ಎಂದರು.
ಒಟ್ಟಾರೆಯಾಗಿ ನನಗೆ ಬಂದ ಮಾಹಿತಿ ಪ್ರಕಾರ ಕಳೆದ ಬಾರಿಗಿಂತ ಹೆಚ್ಚಿನ ಮತದ ಅಂತರದಿಂದ ಶಿವಮೊಗ್ಗದಲ್ಲಿ ಗೆಲ್ಲತ್ತೇನೆ. ರಾಜ್ಯದಲ್ಲಿ ಕೂಡ 25ಕ್ಕೂ ಹೆಚ್ಚಿನ ಸ್ಥಾನ ಬಿಜೆಪಿ ಮೈತ್ರಿಕೂಟಕ್ಕೆ ಬರಲಿದೆ.