ಕಳಲೆ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿರಲಿಕ್ಕಿಲ್ಲ. ಮಳೆಗಾಲ ಆರಂಭವಾಗುತ್ತಲೇ ಬಿದಿರಿನ ಬುಡದಲ್ಲಿ ಬೆಳೆಯುವ ಗಿಡವಿದು. ಇದನ್ನು ಸರಿಯಾಗಿ ಸಂಗ್ರಹಿಸಿಟ್ಟರೆ ವರ್ಷಪೂರ್ತಿ ಇದನ್ನು ಬಳಸಬಹುದು.
ಇದನ್ನು ಸಣ್ಣಗೆ ಕೊಚ್ಚಿ ನೀರಿನಲ್ಲಿ ಎರಡು ದಿನ ನೆನೆಹಾಕಿ ಬಳಿಕ ಅಡುಗೆಗಾಗಿ ಬಳಸಲಾಗುತ್ತದೆ. ಇದರಲ್ಲಿ ಸಾಕಷ್ಟು ಪ್ರೊಟೀನ್, ಕಾರ್ಬೋಹೈಡ್ರೇಟ್, ನಾರಿನಂಶ ಮತ್ತು ಖನಿಜಗಳಿದ್ದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಸಾಕಷ್ಟು ಪ್ರಮಾಣದ ರೋಗ ನಿರೋಧಕ ಶಕ್ತಿ ಇದ್ದು ಇದು ಮಾರಣಾಂತಿಕ ಕಾಯಿಲೆಗಳು ಹತ್ತಿರವೂ ಸುಳಿಯದಂತೆ ನೋಡಿಕೊಳ್ಳುತ್ತದೆ.
ಮಳೆಗಾಲದಲ್ಲಿ ಇದನ್ನು ಸೇವಿಸುವುದರಿಂದ ದೇಹ ಬೆಚ್ಚಗಿರುತ್ತದೆ. ವೈರಸ್ ಅಥವಾ ಬ್ಯಾಕ್ಟೀರಿಯಾಗಳಿಂದ ಹರಡುವ ರೋಗಗಳನ್ನು ತಡೆಯುತ್ತದೆ. ಮೆದುಳನ್ನು ಚುರುಕುಗೊಳಿಸುವ ಇದನ್ನು ನಿತ್ಯ ಸೇವಿಸಿದರೆ ಉಷ್ಣ ಸಂಬಂಧಿ ಸಮಸ್ಯೆಗಳು ಕಂಡು ಬಂದಾವು.
ಗರ್ಭಿಣಿಯರು ಇದನ್ನು ಸೇವಿಸುವುದು ಒಳ್ಳೆಯದಲ್ಲ ಎನ್ನಲಾಗಿದೆ. ಶ್ವಾಸಕೋಶದ ಕಫವನ್ನು ತೆಗೆದು ಹಾಕಿ ನಿಮ್ಮ ಆರೋಗ್ಯವನ್ನು ಸುಸ್ಥಿರವಾಗಿಸುತ್ತದೆ. ಇದನ್ನು ಪಲ್ಯ, ಸಾಂಬಾರು, ಉಪ್ಪಿನಕಾಯಿ ತಯಾರಿ ವೇಳೆ ಬಳಸಲಾಗುತ್ತದೆ. ಇದನ್ನು ಉಪ್ಪು ನೀರಿನಲ್ಲಿ ಹಾಕಿಟ್ಟು ಆರು ತಿಂಗಳ ಬಳಿಕ ಬಳಸುವವರೂ ಇದ್ದಾರೆ.