ಬುಲಂದ್‌ಶಹರ್: ರಸ್ತೆ ನಿರ್ಮಾಣದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯ ಬಗೆಗಿನ ವಿಡಿಯೋ ವೈರಲ್ ಆಗಿದ್ದು, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಜನರು ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಸುಮಾರು 2 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣದಲ್ಲಿ ಅಧಿಕಾರಿಗಳ ಜೊತೆ ಶಾಮೀಲಾಗಿ ಗುತ್ತಿಗೆದಾರರು ಮಾಡಿರುವ ಭ್ರಷ್ಟಾಚಾರದ ವಿಡಿಯೋ ವೈರಲ್ ಆಗಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಆರೋಪಿಸಿದ್ದಾರೆ. ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸ್ಥಳೀಯರು ತಮ್ಮ ಬೆರಳಿನಿಂದ ರಸ್ತೆಯ ದುಸ್ಥಿತಿಯನ್ನು ಅಗೆದು ತೋರಿಸುತ್ತಿರುವುದು ಕಂಡು ಬಂದಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಪ್ಪು ಕಲ್ಲಿದ್ದಲು ಟಾರ್ ಅನ್ನು ಕೈಯಿಂದ ತೆಗೆಯುತ್ತಿರುವುದನ್ನು ಕಾಣಬಹುದು. ಬುಲಂದ್‌ಶಹರ್ ಜಿಲ್ಲೆಯ ಪಹಾಸು ಪ್ರದೇಶದ ಬಾಲೆನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ತಿಂಗಳಿಂದ ಇಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಇನ್ನು ಈ ಬಗ್ಗೆ ಜನರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟವಿಲ್ಲದ ವಸ್ತು ಕಂಡು ಬಂದಲ್ಲಿ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.