ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಬಲು ಹಿತವಾಗಿರುತ್ತೆ. ಅದರಲ್ಲಿರೋ ನೈಸರ್ಗಿಕ ಸಿಹಿ ಮತ್ತು ತಂಪಿನ ಅನುಭವ ಹಣ್ಣು ಪ್ರಿಯರ ಫೇವರಿಟ್. 5000 ವರ್ಷಗಳ ಹಿಂದೆ ಈಜಿಪ್ಟ್ ನಲ್ಲಿ ಕಲ್ಲಂಗಡಿಯ ಆವಿಷ್ಕಾರವಾಗಿದೆಯಂತೆ. ಕಲ್ಲಂಗಡಿ ಸೇವನೆಯಿಂದ ಹೃದ್ರೋಗದಿಂದ ಕ್ಯಾನ್ಸರ್ ವರೆಗಿನ ಅನೇಕ ಖಾಯಿಲೆಗಳಿಂದ ರಕ್ಷಣೆ ಸಿಗುತ್ತದೆ.
ಬೇಸಿಗೆಯಲ್ಲಿ ಡಿಹೈಡ್ರೇಶನ್ ಸಮಸ್ಯೆ ಹೆಚ್ಚು. ಕಲ್ಲಂಗಡಿ ಶೇ.90-92 ರಷ್ಟು ನೀರನ್ನೇ ಹೊಂದಿದೆ. ಸಿಹಿ ತಿನ್ನಬೇಕೆಂಬ ಕಡು ಬಯಕೆಯಾದಾಗ ಕಲ್ಲಂಗಡಿ ತಿಂದರೆ ತೃಪ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಕ್ಯಾಲೋರಿ ಕಡಿಮೆಯಿರುತ್ತದೆ. ಹಾಗಾಗಿ ಎಲ್ಲರೂ ಇದನ್ನು ತಿನ್ನಬಹುದು.
ಕಲ್ಲಂಗಡಿ ವಿಟಮಿನ್ ಎ, ವಿಟಮಿನ್ ಸಿ, ಬಿ6, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್‌ನಂತಹ ವಿವಿಧ ಪೋಷಕಾಂಶಗಳಿಂದ ತುಂಬಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಅನ್ನು ಕೂಡ ಇದು ತಡೆಗಟ್ಟಬಲ್ಲದು.
ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಕಲ್ಲಂಗಡಿಯಲ್ಲಿರೋ ನೀರಿನಂಶ ನಿಮ್ಮ ತ್ವಚೆಗೆ ಒಳ್ಳೆಯದು. ಚರ್ಮದ ವಿನ್ಯಾಸ ಮತ್ತು ಮೃದುತ್ವವನ್ನು ಸುಧಾರಿಸುತ್ತದೆ. ಸೂರ್ಯನ ಕಿರಣಗಳಿಂದ ನಿಮ್ಮನ್ನು ರಕ್ಷಿಸಬಲ್ಲದು. ಕಲ್ಲಂಗಡಿಯಲ್ಲಿರುವ ವಿಟಮಿನ್ ಎ ನಿಮ್ಮ ಕಣ್ಣುಗಳನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾಗಿರಿಸುತ್ತದೆ.
ಕಲ್ಲಂಗಡಿಯಲ್ಲಿರುವ ಪೊಟ್ಯಾಸಿಯಮ್ ಅಂಶವು ವ್ಯಾಯಾಮದ ಸಮಯದಲ್ಲಿ ಮತ್ತು ನಂತರ ಸ್ನಾಯು ನೋವನ್ನು ತಡೆಯಲು ಸಹಾಯ ಮಾಡುತ್ತದೆ. ವ್ಯಾಯಾಮಕ್ಕೂ ಮುನ್ನ ಒಂದು ಬೌಲ್ ಕಲ್ಲಂಗಡಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಗರ್ಭಾವಸ್ಥೆಯಲ್ಲಿ ಕಲ್ಲಂಗಡಿ ಸೇವನೆ ಮಾಡಿದ್ರೆ ಡಿಹೈಡ್ರೇಶನ್ ನಿಂದ ಪಾರಾಗಬಹುದು.
ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಬೆಳಗಿನ ಬೇನೆ ಮತ್ತು ಎದೆಯುರಿಯನ್ನು ನಿವಾರಿಸುತ್ತದೆ. ಇದರಲ್ಲಿರುವ ಖನಿಜಗಳು ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ ಕಾಲಿನ ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಕಲ್ಲಂಗಡಿ ಸುಲಭವಾಗಿ ಜೀರ್ಣವಾಗುವುದರಿಂದ ಗರ್ಭಿಣಿಯರಲ್ಲಿ ಮಲಬದ್ಧತೆಯನ್ನು ನಿವಾರಿಸುತ್ತದೆ.