ತಮ್ಮ ಭಾಗವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕಲ್ಯಾಣ ಕರ್ನಾಟಕ ಜನತೆಯ ಬಹುಕಾಲದ ಕೂಗಿಗೆ ಸ್ಪಂದಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಭರ್ಜರಿ ಬಂಪರ್ ಕೊಡುಗೆ ನೀಡಿದೆ. ವಿಮೋಚನೆಯ ಅಮೃತ ಮಹೋತ್ಸವ ಸಂಭ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 5,000 ಕೋಟಿ ರೂಪಾಯಿಗಳ ಹಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಅಲ್ಲದೆ ಖಾಲಿ ಇರುವ 11,000 ಹುದ್ದೆಗಳನ್ನು ಮುಂದಿನ ವರ್ಷದ ಮಾರ್ಚ್ 31ರೊಳಗೆ ಭರ್ತಿ ಮಾಡಲಾಗುವುದು ಎಂದು ತಿಳಿಸಿರುವ ಬಸವರಾಜ ಬೊಮ್ಮಾಯಿ, ಮೆಗಾ ಜವಳಿ ಪಾರ್ಕ್ ಸೇರಿದಂತೆ ಕೆಲವೊಂದು ಮಹತ್ವದ ಯೋಜನೆಗಳನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ. ರಾಯಚೂರು, ಕೊಪ್ಪಳ ಏರ್ಪೋರ್ಟ್ ಕೆಲಸವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ 21,000 ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ಗೆ 150 ಕೋಟಿ ರೂಪಾಯಿಗಳನ್ನು ನೀಡಲು ತೀರ್ಮಾನಿಸಲಾಗಿದ್ದು, ಕಲಬುರಗಿಯಲ್ಲಿ ಐಟಿ ಕ್ಲಸ್ಟರ್ ಸ್ಥಾಪನೆ, ಬೀದರ್ – ಬಳ್ಳಾರಿ ವಯಾ ಕಲಬುರಗಿ – ರಾಯಚೂರು ಮಾರ್ಗದಲ್ಲಿ ನಾಲ್ಕು ಪಥದ ಎಕ್ಸ್ ಪ್ರೆಸ್ ಹೈವೇ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.