ಇನ್ಫೋಸಿಸ್ ಸಹ ಸಂಸ್ಥಾಪಕರಾಗಿರುವ ನಂದನ್ ನಿಲೇಕಣಿ ದಾನ, ಧರ್ಮದಲ್ಲೂ ಎತ್ತಿದ ಕೈ. ಹಲವಾರು ಜನೋಪಯೋಗಿ ಕಾರ್ಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿರುವ ಅವರು, ಇದೀಗ ತಾವು ಕಲಿತ ಸಂಸ್ಥೆಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ.
ಹೌದು, ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಾಂಬೆ ಐಐಟಿ) ಗೆ 1973ರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಗೆ ಸೇರ್ಪಡೆಗೊಂಡಿದ್ದ ಅವರು, ಇದೀಗ ತಾವು ಕಲಿತ ಸಂಸ್ಥೆಗೆ ಬರೋಬ್ಬರಿ 315 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಈ ಹಿಂದೆ ಅವರು ಇದೇ ಸಂಸ್ಥೆಗೆ 85 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಇದೀಗ ಅವರ ಒಟ್ಟು ಕೊಡುಗೆ 400 ಕೋಟಿ ರೂಪಾಯಿಗಳಾಗಿದೆ.
ನಂದನ್ ನಿಲೇಕಣಿ ಅವರು ನೀಡಿರುವ ಹಣವನ್ನು ಬಳಸಿಕೊಂಡು ಬಾಂಬೆ ಐಐಟಿಯಲ್ಲಿ ವಿಶ್ವ ದರ್ಜೆಯ ಮೂಲ ಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದ್ದು, ಇನ್ನು ಈ ಕುರಿತಂತೆ ಮಾತನಾಡಿರುವ ನಂದನ್ ನಿಲೇಕಣಿ, ನಾನು ಇಲ್ಲಿಂದ ಪಡೆದ ಪದವಿ ನನ್ನ ಜೀವನಕ್ಕೆ ತಳಪಾಯವಾಯಿತು. ಈಗ ನಾನು ನೀಡಿದ ಹಣ ನಾಳೆ ನಮ್ಮ ಜಗತ್ತನ್ನು ರೂಪಿಸುವ ವಿದ್ಯಾರ್ಥಿಗಳಿಗೆ ನೀಡುವ ಗೌರವ ಮತ್ತು ಬದ್ಧತೆಗೆ ಕಾರಣವಾಗಲಿದೆ ಎಂದಿದ್ದಾರೆ.