ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿದ್ದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈಶ್ವರಪ್ಪನವರು ತನಿಖೆ ಬಳಿಕ ದೋಷಮುಕ್ತರಾಗಿದ್ದಾರೆ. ಆದರೂ ಕೂಡ ಅವರಿಗೆ ಈವರೆಗೆ ಸಚಿವ ಸ್ಥಾನ ದೊರೆತಿಲ್ಲ.
ಹೀಗಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಈಶ್ವರಪ್ಪನವರು ಹಾಜರಾಗಿರಲಿಲ್ಲ. ಅಲ್ಲದೆ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದ ಈಶ್ವರಪ್ಪನವರು, ನಾನು ಪ್ರಕರಣದಲ್ಲಿ ದೋಷ ಮುಕ್ತನಾದರೂ ಸಚಿವ ಸ್ಥಾನ ನೀಡಿಲ್ಲ, ಇದರಿಂದ ನನಗೆ ಅಸಮಾಧಾನವಾಗಿದೆ. ಇದರಿಂದ ಸದನಕ್ಕೆ ಹಾಜರಾಗಿಲ್ಲ ಎಂದಿದ್ದರು.
ಆದರೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಯಾವುದೇ ಕಾರಣ ನೀಡದೆ ಸದನಕ್ಕೆ ಗೈರು ಹಾಜರಾಗಿರುವ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿದ ಬಳಿಕ ಈಶ್ವರಪ್ಪ ಉಲ್ಟಾ ಹೊಡೆದಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪನವರು, ನನಗೆ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಸದನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. 1989 ರಿಂದಲೂ ನಾನು ಅಧಿವೇಶನಕ್ಕೆ ಗೈರು ಹಾಜರಾಗಿಲ್ಲ. ಕಾಲು ನೋವು ಇದ್ದ ಕಾರಣ ಈ ಬಾರಿ ಹಾಜರಾಗಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಈ ವಿಚಾರವನ್ನು ಸಭಾಧ್ಯಕ್ಷರ ಗಮನಕ್ಕೆ ತಂದು ಅನುಮತಿ ಪಡೆಯಬೇಕಾಗಿತ್ತು. ಅದನ್ನು ಪಾಲಿಸದ ಕಾರಣ ನನಗೆ ನೋಟಿಸ್ ನೀಡಿರಬಹುದು. ಆದರೆ ಈ ನೋಟೀಸ್ ನನಗೆ ಇನ್ನೂ ತಲುಪಿಲ್ಲ ಅದು ಬಂದ ಬಳಿಕ ತಕ್ಷಣವೇ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.