
ಬಹಮನಿ, ಆದಿಲ್ ಶಾಹಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಬೀದರ್ ರಾಷ್ಟ್ರಕೂಟ, ಚಾಲುಕ್ಯರ ಕಾಲದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. ಮದರಸಾ ವಿದ್ಯಾಲಯ, ಕೋಟೆ, ಚೌಬಾರಾ, ನಾನಕ್ ಜಿರಾ ಮೊದಲಾದವು ಪ್ರಮುಖ ಸ್ಥಳಗಳಾಗಿವೆ.
ಬಹಮನಿ ಅರಸರ ಮಂತ್ರಿಯಾಗಿದ್ದ ಮಹಮ್ಮದ್ ಗವಾನ್ ಶಿಕ್ಷಣ ಪ್ರೇಮಿಯಾಗಿದ್ದು, ಆತ ನಿರ್ಮಿಸಿದ ಮದರಸಾ ಕಟ್ಟಡ ಪ್ರಮುಖ ಶಿಕ್ಷಣ ಕೇಂದ್ರವಾಗಿತ್ತು. ಇಲ್ಲಿ ಸಾವಿರಾರು ಗ್ರಂಥಗಳನ್ನು ಸಂಗ್ರಹಿಸಲಾಗಿದ್ದು, ದೇಶ, ವಿದೇಶಗಳ ವಿದ್ಯಾರ್ಥಿಗಳು ಅಧ್ಯಯನಕ್ಕೆ ಬರುತ್ತಿದ್ದರಂತೆ.
ಬೀದರ್ ಗೆ 7 ಪ್ರವೇಶ ಕಮಾನುಗಳಿದ್ದು, ದ್ವಾರದಲ್ಲಿ ಸುಮಾರು 71 ಅಡಿ ಎತ್ತರದ ನಿರೀಕ್ಷಣಾ ಗೋಪುರ(ಚೌಬಾರಾ) ನಿರ್ಮಿಸಲಾಗಿದೆ. ಈ ಗೋಪುರದ ಸಹಾಯದಿಂದ ನಗರದಲ್ಲಿ ನಡೆಯುತ್ತಿದ್ದ ಚಟುವಟಿಕೆ ಗಮನಿಸಲಾಗುತ್ತಿತ್ತು. ಶತ್ರುಗಳ ಬಗ್ಗೆ ಎಚ್ಚರ ವಹಿಸಲು ಕೂಡ ಈ ಗೋಪುರ ಬಳಸಲಾಗುತ್ತಿತ್ತು. ಬೀದರ್ ಕೋಟೆ, 14 ಅಡಿಯಷ್ಟು ಉದ್ದ ಇರುವ ಕಲಾತ್ಮಕತೆಯಿಂದ ಕೂಡಿದ ತೋಪು ಗಮನ ಸೆಳೆಯುತ್ತದೆ. ವಸ್ತು ಸಂಗ್ರಹಾಲಯದಲ್ಲಿ ಕೋವಿ, ತುಪಾಕಿ, ಗುಂಡು, ಫಿರಂಗಿ ಮೊದಲಾದವುಗಳನ್ನು ನೋಡಬಹುದು.
ರಂಗೀನ್ ಮಹಲ್ ಕಣ್ಮನ ಸೆಳೆಯುತ್ತದೆ. ಬೀದರ್ ನಲ್ಲಿ ಗುರುದ್ವಾರ(ನಾನಕ್ ಜಿರಾ)ಕ್ಕೆ ಹೆಚ್ಚಿನ ಜನ ಭೇಟಿ ನೀಡುತ್ತಾರೆ. ಇನ್ನು ಇಲ್ಲಿನ ಉದ್ಯಾನವನ ಕೂಡ ಮನರಂಜನಾ ತಾಣವಾಗಿದ್ದು, ನಾನಕ್ ಜಯಂತಿಯಂದು ಅಪಾರ ಜನ ಭೇಟಿ ನೀಡುತ್ತಾರೆ. ಇಷ್ಟೇ ಅಲ್ಲದೇ, ಇನ್ನು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ.