ಇಪ್ಪತ್ತು ವರ್ಷಗಳ ಹಿಂದೆ ಪ್ರಮಾಣಿತವಲ್ಲದ ಅಮುಲ್ ಐಸ್ ಕ್ರೀಮ್ ಅನ್ನು ಮಾರಾಟ ಮಾಡಿದ್ದ ಮೂವರಿಗೆ ಈಗ ಶಿಕ್ಷೆ ಪ್ರಾಪ್ತಿಯಾಗಿದೆ. ಮಧ್ಯಪ್ರದೇಶದ ಮ್ಯಾಜಿಸ್ಟ್ರೇಟ್ ನ ಪ್ರಥಮ ದರ್ಜೆ ನ್ಯಾಯಾಲಯವು ಶುಕ್ರವಾರ ಮೂರು ಜನರಿಗೆ ಆರು ಸಾವಿರ ರೂಪಾಯಿ ದಂಡದ ಜೊತೆಗೆ, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
2002 ರ, ಜುಲೈ 21ನೇ ತಾರೀಖಿನಂದು ಆಹಾರ ನಿರೀಕ್ಷಕ ಎಬಿ ಚೌಧರಿ ಅವರು, ಅಗರ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ರಾಕೇಶ್ ಜೈನ್ ಅವರ ಆಹಾರ ಮಳಿಗೆಯನ್ನು ಪರಿಶೀಲಿಸಿದ್ದರು. ಆಗ ಅವರು ಪರೀಕ್ಷೆಗಾಗಿ ವೆನಿಲ್ಲಾ ಮತ್ತು ಸ್ಟ್ರಾಬೆರಿ ಐಸ್ ಕ್ರೀಮ್‌ಗಳ ಮಾದರಿಗಳನ್ನು ಸಂಗ್ರಹಿಸಿದ್ದರು. ಭೋಪಾಲ್ ಪ್ರಯೋಗಾಲಯದಿಂದ ಪಡೆದ ವರದಿಯಲ್ಲಿ ಸ್ಟ್ರಾಬೆರಿ ರುಚಿಯ ಐಸ್ ಕ್ರೀಮ್‌ನಲ್ಲಿ ಕಲಬೆರಕೆ ಇದೆ ಎಂದು ಉಲ್ಲೇಖಿಸಲಾಗಿದೆ.
ಇಪ್ಪತ್ತು ವರ್ಷಗಳ ಹಿಂದೆ ದಾಖಲಾಗಿದ್ದ ಈ ಪ್ರಕರಣದ ತೀರ್ಪು ಈಗ ಹೊರಬಿದ್ದಿದ್ದು, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಡಿಪೋ ಇನ್‌ಚಾರ್ಜ್ ಎಸ್‌ವಿ ದೀಕ್ಷಿತ್, ಮದರ್ ಡೈರಿ ಗುಣಮಟ್ಟ ನಿಯಂತ್ರಕ ಘನಶ್ಯಾಮ್ ಜೆ ಸೋನಿ ಮತ್ತು ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕ ಬಿಎಂ ವ್ಯಾಸ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ನೀಡಲಾಗಿದೆ. ವಿತರಕ ಜೈನ್ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.