ಬೆಂಗಳೂರು: ಕಲಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜೆಡಿಎಸ್ ಜೊತೆ ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚಿಸುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರ್ಗಿ ಪಾಲಿಕೆಯ 55 ವಾರ್ಡ್ ಗಳಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಹಾಗೂ ಪಕ್ಷೇತರರು 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಮ್ಯಾಜಿಕ್ ಸಂಖ್ಯೆ 28 ಆಗಿರುವುದರಿಂದ ಕಾಂಗ್ರೆಸ್ ಗೆ ಇನ್ನು ಒಂದು ಸೀಟು ಬೇಕಿದೆ.
ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿ ನಂತರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.
ಒಟ್ಟಾರೆ ಕಲಬುರ್ಗಿಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಜೆಡಿಎಸ್ ಜೊತೆ ಸೇರಿ ಮೇಯರ್ ಸ್ಥಾನ ಪಡೆಯಲು ಯೋಜನೆ ರೂಪಿಸಿದೆ.