ಮೈಸೂರು: ಮೈಸೂರು ಹಾಗೂ ಕರ್ನಾಟಕ ರಾಜ್ಯದ ಸಮಸ್ತ ನಾಗರಿಕ ಬಂಧುಗಳಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಮೋದಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭ, ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆರವೇರಿಸಿದ ಅವರು, ಮೈಸೂರು ಸಾಂಸ್ಕೃತಿಕ ನಗರ, ಐತಿಹಾಸಿಕ ನಗರವಾಗಿದ್ದು, ಅಂತರರಾಷ್ಟ್ರೀಯ ಯೋಗ ದಿವಸದ ಉತ್ಸವ ಮೈಸೂರಿನಲ್ಲಿ ನಡೆಯುತ್ತಿದೆ. ಆರ್ಥಿಕತೆ, ಆಧ್ಯಾತ್ಮಿಕ ಎರಡು ಕಾಣಸಿಗುವ ಊರು. ಮೈಸೂರು ಇತಿಹಾಸ, ಪರಂಪರೆ ಮತ್ತು ಆಧುನಿಕತೆಯ ಮಿಶ್ರಣವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರು, ಸರ್ ಎಂ. ವಿಶ್ವೇಶ್ವರಯ್ಯ, ರಾಷ್ಟ್ರಕವಿ ಕುವೆಂಪು ಅನೇಕ ಮಹನೀಯರ ಊರು ಮೈಸೂರು. ಭಾರತದ ವಿಕಾಸಕ್ಕೆ ಮೈಸೂರು ಕೊಡುಗೆ ಅಪಾರ ಎಂದರು.
ಯಾರಿಗೆ ಕೇಳಲು, ಮಾತನಾಡಲು ಬರುವುದಿಲ್ಲವೋ ಅವರಿಗೆ ಚಿಕಿತ್ಸೆ ನೀಡುವ ಕೇಂದ್ರ ಇಂದು ಉದ್ಘಾಟನೆಯಾಗಿದೆ. ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದು ಖುಷಿ ತಂದಿದೆ. ಫಲಾನುಭವಿ ರೈತರ ಅನುಭವದಿಂದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಅವಕಾಶ ಸಿಕ್ಕಿದೆ. ಕಳೆದ 7 ದಶಕಗಳಲ್ಲಿ ಕರ್ನಾಟಕ ಅನೇಕ ಸರ್ಕಾರಗಳನ್ನು ಕಂಡಿದೆ. ಬಡವರು, ರೈತರು, ದಲಿತರು, ಮಹಿಳೆಯರು ಹಿಂದುಳಿದವರ ಬಗ್ಗೆ ತುಂಬಾ ಮಾತನಾಡಿದರು. ಇವರಿಗೆ ಕೆಲವು ಯೋಜನೆಗಳನ್ನು ರೂಪಿಸಿದ್ದರು. ಆದರೆ ಇದರ ಪ್ರಭಾವ, ಲಾಭ ಕಡಿಮೆಯಾಗಿತ್ತು ಎಂದು ಮೋದಿ ಹೇಳಿದರು.
ಯೋಜನೆಗಳನ್ನು ಜನರಿಗೆ ತಲುಪಿಸಲು ನಾವು ಮಿಷನ್ ರೀತಿ ನಾವು ಕೆಲಸ ಮಾಡಿದೆವು. ಎಂಟು ವರ್ಷದಲ್ಲಿ ಬಡವರ ಕಲ್ಯಾಣ ಯೋಜನೆಗಳು ವ್ಯಾಪಕವಾಗಿ ವಿಸ್ತಾರಗೊಂಡಿದೆ. 2014ರಲ್ಲಿ ನಮಗೆ ಅಧಿಕಾರ ಕೊಟ್ಟಿದ್ದೀರಿ. ಒನ್ ನೇಷನ್ ಒನ್ ರೇಷನ್ ಯೋಜನೆ ದೇಶದಲ್ಲಿ ಜಾರಿಯಾಗಿದೆ. ಒಂದು ರಾಜ್ಯಕ್ಕೆ ಸೀಮಿತವಾಗಿದ್ದ ಯೋಜನೆಗಳನ್ನು ದೇಶದಲ್ಲಿ ವಿಸ್ತರಿಸಲಾಗಿದೆ. ಕರ್ನಾಟಕದ ನಾಗರಿಕ ಬೇರೆ ರಾಜ್ಯಕ್ಕೆ ಹೋದರೂ ಪಡಿತರ ಸಿಗುತ್ತಿದೆ ಎಂದರು.