ಕರ್ನಾಟಕದ ಏಳು ಅದ್ಭುತಗಳ ಘೋಷಣೆ; ಇಲ್ಲಿದೆ ಅವುಗಳ ಪಟ್ಟಿ 26-02-2023 8:20AM IST / No Comments / Posted In: Karnataka, Latest News, Live News, Tourism ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ಕರ್ನಾಟಕದ ಏಳು ಅದ್ಭುತ’ ಗಳ ಅಧಿಕೃತ ಘೋಷಣೆ ಮಾಡಿದ್ದು, ಶನಿವಾರದಂದು ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಏಳು ಅದ್ಭುತಗಳು ಇರುವ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕೊಪ್ಪಳ ಜಿಲ್ಲೆ, ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಹಿರೇ ಬೆಣಕಲ್ ಗ್ರಾಮದ ಶಿಲಾ ಸಮಾಧಿಗಳು. 14ರಿಂದ 16ನೇ ಶತಮಾನದ ನಡುವೆ ನಿರ್ಮಾಣಗೊಂಡ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ವಿಜಯನಗರ ಜಿಲ್ಲೆಯ ಹಂಪಿ. ಹತ್ತನೇ ಶತಮಾನದಲ್ಲಿ ಸ್ಥಾಪನೆಯಾದ ಪ್ರಸ್ತುತ ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿರುವ 57 ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆ. 17ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನ ಮಹಮ್ಮದ್ ಆದಿಲ್ ಶಾಹಿ ನಿರ್ಮಿಸಿದ ಹಾಲಿ ವಿಜಯನಗರ ಜಿಲ್ಲೆಯಲ್ಲಿರುವ ಗೋಲಗುಮ್ಮಟ. 19 – 20ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡಿರುವ ಮೈಸೂರಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ಜೋಗ ಜಲಪಾತ. ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿ ಅರಬ್ಬಿ ಸಮುದ್ರದ ನಡುವೆ ಇರುವ ನೇತ್ರಾಣಿ ದ್ವೀಪ ಕರ್ನಾಟಕದ ಏಳು ಅದ್ಭುತಗಳಾಗಿವೆ. ಒಂದು ವರ್ಷಗಳ ಕಾಲ ನಡೆದ ಈ ಸಮೀಕ್ಷೆಯಲ್ಲಿ 5000 ಸ್ಥಳಗಳು ನಾಮ ನಿರ್ದೇಶನಗೊಂಡಿದ್ದು, 82 ಲಕ್ಷ ಜನ ಮತ ಚಲಾವಣೆಯಾಗಿತ್ತು. ಐದು ಕಠಿಣ ಸುತ್ತುಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದ್ದು, ವಿಷಯ ತಜ್ಞರ ಏಳು ಮಂದಿಯನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಅಭಿಯಾನದ ರಾಯಭಾರಿಯಾಗಿ ಹಿರಿಯ ನಟ ರಮೇಶ್ ಅರವಿಂದ್ ಪಾಲ್ಗೊಂಡಿದ್ದರು.