ಮಂಗಳೂರು: ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದಂತೆ ಸಿಆರ್ ಝೆಡ್ ನೀತಿ ಬದಲಾವಣೆಗೆ ಒಪ್ಪಿಗೆ ನೀಡಲಾಗಿದೆ. ಕಾರವಾರದ ಮಾಜಾಳಿ ಬಂದರು ಅಭಿವೃದ್ಧಿಗೆ ಅನುಮೋದನೆ ಸಿಕ್ಕಿದೆ. ಮತ್ಸ್ಯ ಸಂಪದ ಯೋಜನೆ ಜಾರಿಯಾಗಿದೆ ಇವೆಲ್ಲವೂ ಡಬಲ್ ಇಂಜಿನ್ ಸರ್ಕಾರದ ಯೋಜನೆಗಳಾಗಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೆಲವರು ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿ ಜತೆಗೆ ಭಾರತದ ಅಭಿವೃದ್ಧಿಯನ್ನು ಡಬಲ್ ಇಂಜಿನ್ ಸರ್ಕಾರ ಮಾಡುತ್ತಿದೆ. ದೇಶದ ಅಭಿವೃದ್ಧಿಯಾಗಬೇಕೆಂದರೆ ಮೊದಲು ಬಂದರುಗಳ ಅಭಿವೃದ್ಧಿಯಾಗಬೇಕು ಎಂದು ಪ್ರಧಾನಿ ಮೋದಿ ಕನಸು ಕಂಡಿದ್ದರು. ಆ ಕನಸು ಮಂಗಳೂರು ಬಂದರು ಅಭಿವೃದ್ಧಿ ಮೂಲಕ ಸಾಕಾರಗೊಂಡಿದೆ ಎಂದರು.
8 ವರ್ಷಗಳ ಯೋಜನೆಗೆ ಈಗ ಪ್ರತಿಫಲ ಸಿಕ್ಕಿದೆ. 3,800 ಕೋಟಿ ಮೊತ್ತದಲ್ಲಿ ಮಂಗಳೂರು ಬಂದರು ಅಭಿವೃದ್ದಿಯಾಗುತ್ತಿದೆ. ನಾಲ್ಕು ಪಟ್ಟು ಸಾಮರ್ಥ್ಯ ಹೆಚ್ಚುತ್ತಿದೆ. ಕರಾವಳಿ ಮೂಲಕ ಇಡೀ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಸಿಆರ್ ಝೆಡ್ ಕರ್ನಾಟಕ ಪ್ಲಾನ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಹಲವು ಸಮಸ್ಯೆಗಳು ಪರಿಹಾರವಾದಂತಾಗಿದೆ. ಕಾರವಾರದ ಮಾಜಾಳಿ ಬಂದರನ್ನು 350 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಮತ್ಸ್ಯ ಸಂಪದ ಯೋಜನೆಯಡಿ 100 ಹೈಸ್ಪೀಡ್ ದೋಣಿಗಳನ್ನು ಶೇ.40ರ ಸಬ್ಸಿಡಿಯಲ್ಲಿ ಒದಗಿಸಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಈ ದೋಣಿಗಳು ಸಹಕಾರಿಯಾಗಿವೆ. ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಸೌಲಭ್ಯ, ವಸತಿ ಸೌಕರ್ಯ ಸೇರಿದಂತೆ ಹಲವು ಯೋಜನೆಗಳನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.