ಇಡ್ಲಿ, ದೋಸೆ ಮಾಡಿದಾಗ ಚಟ್ನಿ, ಸಾಂಬಾರು ಮಾಡುತ್ತೇವೆ. ಕೆಲವರು ಚಟ್ನಿ ಪುಡಿ ಕೂಡ ಮಾಡಿ ಉಪಯೋಗಿಸುತ್ತಾರೆ. ಇಲ್ಲಿ ಆರೋಗ್ಯಕರವಾದ ಕರಿಬೇವಿನಸೊಪ್ಪಿನ ಚಟ್ನಿ ಪುಡಿ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
4ಕಪ್-ಕರಿಬೇವಿನ ಸೊಪ್ಪು, ½ ಕಪ್-ಉದ್ದಿನಬೇಳೆ, 12-ಒಣಮೆಣಸು, 1 ಟೀ ಸ್ಪೂನ್- ಇಂಗು, 1 ಟೀ ಸ್ಪೂನ್-ಕರಿಮೆಣಸು, 1 ಟೀ ಸ್ಪೂನ್- ಜೀರಿಗೆ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಕರಿಬೇವಿನ ಸೊಪ್ಪನ್ನು ಚೆನ್ನಾಗಿ ತೊಳೆದು ನ್ಯೂಸ್ ಪೇಪರ್ ಅಥವಾ ಕಾಟನ್ ಬಟ್ಟೆಯ ಮೇಲೆ ಹರವಿ. ನೀರಿನ ಪಸೆಯೆಲ್ಲಾ ಒಣಗಲಿ.
ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಈ ಕರಿಬೇವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಎಲೆಗಳು ಗರಿಗರಿಯಾದ ಮೇಲೆ ಇದನ್ನು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ಅದೇ ಪ್ಯಾನ್ ಗೆ ಉದ್ದಿನಬೇಳೆ ಹಾಕಿ ಕೆಂಪಾಗಾಗುವವರೆಗ ಹುರಿದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ.
ನಂತರ ಒಣಮೆಣಸು ಹುರಿದು ಎತ್ತಿಟ್ಟುಕೊಳ್ಳಿ. ಹಾಗೇ ಜೀರಿಗೆ, ಕರಿಮೆಣಸು ಎರಡನ್ನೂ ಪರಿಮಳ ಬರುವವರಗೆ ಹುರಿದಿಟ್ಟುಕೊಳ್ಳಿ. ಕೊನೆಗೆ ಹಿಂಗನ್ನು ಹಾಕಿ ಸ್ವಲ್ಪ ಹುರಿದು ಎತ್ತಿಟ್ಟುಕೊಳ್ಳಿ. ಹುರಿದಿಟ್ಟುಕೊಂಡ ಮಸಾಲೆಗಳೆಲ್ಲಾ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರು ತೆಗೆದುಕೊಂಡು ಅದಕ್ಕೆ ಉದ್ದಿನಬೇಳೆ, ಒಣಮೆಣಸು, ಜೀರಿಗೆ ಕರಿಮೆಣಸು ಇಂಗು, ಉಪ್ಪು ಹಾಕಿ ಪುಡಿಮಾಡಿಕೊಳ್ಳಿ. ನಂತರ ಕರಿಬೇವು ಹಾಕಿ ಪುಡಿಮಾಡಿ. ಇದನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ.