ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಿಗೆ ಸ್ಥಳೀಯ ಜನಪ್ರಿಯ ವ್ಯಕ್ತಿಗಳ ಹೆಸರಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಮನವಿ ಮಾಡಿದ್ದಾರೆ.
ಕರಾವಳಿ ರೈಲುಗಳಿಗೆ ಐತಿಹಾಸಿಕ ಹಾಗೂ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು-ಮಂಗಳೂರು-ಕಣ್ಣೂರು ಎಕ್ಸ್ ಪ್ರೆಸ್ ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್ ಪ್ರೆಸ್, ತಿರುವಂತಪುರಂ- ಮುಂಬೈ ಎಕ್ಸ್ ಪ್ರೆಸ್ ಗೆ ನೇತ್ರಾವತಿ ಎಕ್ಸ್ ಪ್ರೆಸ್ ಎಂದು ಹೆಸರಿರುವಂತೆ ಬೆಂಗಳೂರು-ಮೈಸೂರು-ಮಂಗಳೂರು ಎಕ್ಸ್ ಪ್ರೆಸ್ ರೈಲಿಗೆ ಮಂಗಳಾದೇವಿ ಎಕ್ಸ್ ಪ್ರೆಸ್, ಮಂಗಳೂರು ಸೆಂಟ್ರಲ್ ಮಡ್ಗಾಂವ್ ರೈಲಿಗೆ ಸೌಪರ್ಣಿಕಾ ಎಕ್ಸ್ ಪ್ರೆಸ್, ಮಂಗಳೂರು ಸೆಂಟ್ರಲ್-ಕೊಯಮತ್ತೂರ್ ಜಂಕ್ಷನ್ ಇಮ್ತರ್ ಸಿಟಿ ಎಕ್ಸ್ ಪ್ರೆಸ್ ಗೆ ತುಳುನಾಡು ಇಂಟರ್ ಸಿಟಿ ಎಕ್ಸ್ ಪ್ರೆಸ್ ಹಾಗೂ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ ಗೆ ತೇಜಸ್ವಿನಿ ಎಕ್ಸ್ ಪ್ರೆಸ್ ಎಂದು ಹೆಸರಿಡುವಂತೆ ಸಲಹೆ ನೀಡಿದ್ದಾರೆ.
ಮಂಗಳೂರಿನಿಂದ ಹೊರಡುವ ಹಾಗೂ ಮಂಗಳೂರಿನ ಮೂಲಕ ಹಾದುಹೋಗುವ ಹಲವು ರೈಲುಗಳಿಗೆ ಯಾವುದೇ ಹೆಸರಿಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ರೈಲುಗಳಿಗೆ ಸ್ಥಳೀಯ ನದಿಗಳು, ಪಾರಂಪರಿಕ ಸ್ಥಳಗಳು, ಹೆಸರಾಂತ ವ್ಯಕ್ತಿಗಳ ಹೆಸರಿಡುವುದರಿಂದ ಕರಾವಳಿ ಜಿಲ್ಲೆಯ ಜನರಿಗೆ ಹೆಮ್ಮೆ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದಿದ್ದಾರೆ.