ದಕ್ಷಿಣ ಕನ್ನಡದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಸುಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ಅಡಚಣೆ ಉಂಟಾಗಿದೆ.
ಕುಮಾರಧಾರಾ ಹಾಗೂ ನೇತ್ರಾವತಿ ನದಿಗಳು ನಿರಂತರ ಮಳೆಯಿಂದಾಗಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟವು ಸಂಪೂರ್ಣ ಮುಳುಗಡೆಯಾಗಿದ್ದರೆ ದೇವರ ಕಟ್ಟೆ ಭಾಗಶಃ ಮುಳುಗಡೆಯಾಗಿದೆ.
ಸ್ನಾನಘಟ್ಟವು ಸಂಪೂರ್ಣ ಜಲಾವೃತಗೊಂಡಿದ್ದರೂ ಸಹ ದೇವರ ದರ್ಶನಕ್ಕೆ ಬಂದ ಭಕ್ತರು ಅಪಾಯದ ನಡುವೆಯೇ ಪ್ರವಾಹ ನೀರಿನಲ್ಲಿ ತೀರ್ಥ ಸ್ನಾನವನ್ನು ಮಾಡಿದ್ದಾರೆ. ಭಕ್ತಾದಿಗಳಿಗೆ ತೀರ್ಥಸ್ನಾನಕ್ಕೆ ಇಳಿದಾಗ ಅಪಾಯವಾಗದೇ ಇರಲಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಸುತ್ತಲು ಹಗ್ಗವನ್ನು ಕಟ್ಟಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.
ರಾತ್ರಿ ಹಾಗೂ ಹಗಲು ಪಾಳಿಯಲ್ಲಿ ಸ್ನಾನ ಘಟ್ಟದ ಸಮೀಪ ಇಬ್ಬರು ಸದಸ್ಯರನ್ನೊಳಗೊಂಡ ರಕ್ಷಕ ಪಡೆಯನ್ನು ನೇಮಿಸಲಾಗಿದೆ. ಇವರು ಭಕ್ತರಿಗೆ ತೀರ್ಥ ಸ್ನಾನ ಮಾಡುವಾಗ ಅಪಾಯವಾಗದಂತೆ ನೋಡಿಕೊಳ್ತಿದ್ದಾರೆ.