ಶ್ವಾನ ಹಾಗೂ ದೊಡ್ಡ ಕರಡಿಯೊಂದು ಮುಖಾಮುಖಿಯಾದ ವಿಡಿಯೋ ಇದೀಗ ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿದೆ. ಕರಡಿ ಎದುರಾದರೂ ಓಡಿಹೋಗದೆ, ಭೀತಿಗೊಳ್ಳದ ನಾಯಿ ಧೈರ್ಯದಿಂದ ಹೋರಾಡಿದೆ. ನಾಯಿಯ ಧೈರ್ಯಕ್ಕಾಗಿ ಇಂಟರ್ನೆಟ್ ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಬೆಳ್ಳಂಬೆಳಗ್ಗೆ ಮನೆಯೊಂದರ ಬಳಿ ಎಂಟ್ರಿ ಕೊಟ್ಟಿದ್ದ ಕರಡಿಯನ್ನು ಕಂಡು ನಾಯಿ ಭೀತಿಗೊಳ್ಳದೆ ಅದರ ಮುಂದೆ ನಿಂತು ಬೊಗಳಲು ಶುರು ಮಾಡಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿರುವ ವಿಡಿಯೋದಲ್ಲಿ ನಾಯಿಯು ಕರಡಿಯನ್ನು ನೋಡುತ್ತಲೇ ಯಾವುದೇ ಅಳುಕಿಲ್ಲದೆ ಬೊಗಳಲು ಶುರು ಮಾಡಿದೆ.
ವಿಡಿಯೋದಲ್ಲಿ ನೋಡುವಂತೆ ದೈತ್ಯ ಕರಡಿ ಮಾತ್ರ ಸುಮ್ಮನೆ ನಿಂತು ಬಿಟ್ಟಿದೆ. ಆದರೆ, ನಾಯಿಯು ಕರಡಿ ಸ್ಥಳದಿಂದ ಹೋಗುವವರೆಗೂ ಬೊಗಳುವುದನ್ನು ಕಡಿಮೆ ಮಾಡಿಲ್ಲ. ದೈತ್ಯ ಕರಡಿಯನ್ನು ಹೆದರಿಸುವ ಸಲುವಾಗಿ ಹತ್ತಿರಕ್ಕೆ ಬಂದ ಶ್ವಾನ ಮತ್ತಷ್ಟು ಜೋರಾಗಿ ಬೊಗಳಿದೆ. ಕೊನೆಗೆ ಕರಡಿಯು ಅಲ್ಲಿಂದ ತೆರಳಿದೆ.
ಧೈರ್ಯಶಾಲಿ ನಾಯಿ ಕರಡಿಯನ್ನು ಮನೆಯಿಂದ ದೂರ ಓಡಿಸಿದೆ ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕರಡಿಯಿಂದ ಮನೆಯನ್ನು ರಕ್ಷಿಸಿದ್ದಕ್ಕಾಗಿ ನಾಯಿಯ ಸ್ವಾಮಿನಿಷ್ಠೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನ್ನ ಪ್ರಾಣ ಕೊಟ್ಟಾದ್ರೂ ತನ್ನ ಮಾಲೀಕರನ್ನು ಶ್ವಾನಗಳು ಕಾಪಾಡುತ್ತವೆ ಅನ್ನೋದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದರೆ ತಪ್ಪಲ್ಲ.
ವರದಿಗಳ ಪ್ರಕಾರ ಕಪ್ಪು ಕರಡಿಗಳು ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಕಂಡುಬರುವ ಕರಡಿಗಳ ಏಕೈಕ ಜಾತಿಯಾಗಿದೆ ಎಂದು ಹೇಳಲಾಗಿದೆ. ಅವುಗಳು ಸ್ವಭಾವದಲ್ಲಿ ಆಕ್ರಮಣಕಾರಿಯಲ್ಲ. ಅಲ್ಲದೆ, ದೈತ್ಯ ಕಪ್ಪು ಕರಡಿಗಳು ದಾಳಿ ಮಾಡಿದಂತಹ ಪ್ರಕರಣಗಳು ಆ ಪ್ರದೇಶದಲ್ಲಿ ನಡೆದಿರುವ ಬಹಳ ಕಡಿಮೆ ಎನ್ನಲಾಗಿದೆ.