ಕೈತುಂಬಾ ಬಳೆ ತೊಡುವುದು ಹಳೆ ಫ್ಯಾಶನ್ ಎಂದು ಮೂಗು ಮುರಿಯದಿರಿ. ಟ್ರೆಂಡಿಯಾಗಿರುವ ಆಧುನಿಕ ಬಳೆಗಳನ್ನು ಧರಿಸಿ, ಕಚೇರಿ, ಪಾರ್ಟಿ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು ಈಗ ಕಾಮನ್ ಆಗಿದೆ.
ಗಾಜಿನ ಬಳೆಗಳನ್ನು ಮೀರಿಸುವ ಆಧುನಿಕ ಪ್ಲಾಸ್ಟಿಕ್ ಬಳೆ, ರಿಂಗ್ ಬಳೆ, ರೇಷ್ಮೆ ನೂಲಿನಲ್ಲಿ ಸುತ್ತಿರುವ ಬಳೆ, ಡಿಸೈನರ್ ಬಳೆ, ಕುಂದನ್ ವರ್ಕ್ ಬಳೆ, ಕಡಗ ಬಳೆಗಳು ಮಾರುಕಟ್ಟೆಯನ್ನು ಆಳುತ್ತಿವೆ.
ಆಯಾ ಪ್ರಕಾರದ ಬಟ್ಟೆಗೆ ತಕ್ಕಂತ ಬಳೆಗಳನ್ನು ಧರಿಸುವುದು ಇಂದಿನ ಫ್ಯಾಶನ್. ನೀವು ಮದುವೆ ಮುಂತಾದ ಶುಭ ಸಮಾರಂಭಗಳಿಗೆ ತೆರಳುವವರಾದರೆ ಗಾಜಿನ ಬಳೆ ಧರಿಸಿ. ಮೇಲೆ ಕೆಳಗೆ ಚಿನ್ನದ ಬಳೆ ಹಾಕಿದರೆ ಅದರೆ ಗತ್ತೇ ಬೇರೆ. ಪ್ಲಾಸ್ಟಿಕ್ ಬಳೆಯಾದರೂ ಮೇಲೆ ಕೆಳಗೆ ದಪ್ಪನೆಯ ಎರಡು ಫ್ಯಾನ್ಸಿ ಬಳೆ ಇರಲಿ.
ನೀವು ಕಾರ್ಯಕ್ರಮಕ್ಕೆ ಗಾಗ್ರಾ ಚೋಲಿ ಧರಿಸುವವರಾದರೆ ಅದಕ್ಕೆ ಮ್ಯಾಚ್ ಆಗುವ ಕುಂದನ್ ಡಿಸೈನ್ ಬಳೆಗಳನ್ನು ಧರಿಸಿ. ಅಂಬ್ರೆಲ್ಲಾ ಉಡುಪಿಗೆ ಥ್ರೆಡ್ ಬಳೆ ಸೊಗಸಾಗಿ ಕಾಣುತ್ತದೆ. ಬೆವರಿಗೆ ಬಣ್ಣ ಬಿಟ್ಟು ಕೈಯೆಲ್ಲಾ ಕಲರ್ ಮಾಡುವ ಬಳೆಗಳ ಬಗ್ಗೆ ಎಚ್ಚರವಿರಲಿ. ಗಾಜಿನ ಬಳೆಗಳನ್ನು ಪೇಪರ್ ನಲ್ಲಿ ಸುತ್ತಿ ಇಟ್ಟರೆ ಅದರ ಅಂದ ಹಾಳಾಗುವುದಿಲ್ಲ.
ಚಿನ್ನ, ವಜ್ರ ಅಥವಾ ಮುತ್ತಿನ ಬಳೆಗಳನ್ನು ಕೈಯಲ್ಲಿ ಧರಿಸಿದ್ದಾಗ ಸಾಕಷ್ಟು ಎಚ್ಚರವಾಗಿರಿ. ಪದೇ ಪದೇ ಕೈಗೆ ನೀರು ಸೋಕಿಸದಿರಿ. ಅವುಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಕಟ್ಟಿ ಒಡವೆ ಬಾಕ್ಸಿಗೆ ಹಾಕಿಡಿ. ಇದರಿಂದ ಹೊಳಪು ಹಾಗೂ ಗುಣಮಟ್ಟ ಹಾಳಾಗದೆ ಉಳಿಯುತ್ತದೆ.