ಸಣ್ಣ ಪುಟ್ಟ ವಿಚಾರಗಳಿಗೆ ಹೊಡೆದಾಟ, ಕೊಲೆ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇವೆ. ಇಟಲಿಯ ರೆಸ್ಟೋರೆಂಟ್ ಒಂದರಲ್ಲಿ ಗ್ರಾಹಕ ಕ್ಷುಲ್ಲಕ ಕಾರಣಕ್ಕೆ ಬಾಣಸಿಗನ ಮೇಲೆ ಗುಂಡು ಹಾರಿಸಿದ್ದಾನೆ. ತಡವಾಗಿ ಊಟ ಸರ್ವ್ ಮಾಡಿದ್ದಲ್ಲದೆ, ಉಪ್ಪು ಕೂಡ ಕಡಿಮೆಯಾಗಿದ್ದಕ್ಕೆ ರೊಚ್ಚಿಗೆದ್ದ ಗ್ರಾಹಕ ಈ ಕೃತ್ಯ ಎಸಗಿದ್ದಾನೆ.
29 ವರ್ಷದ ಫೆಡೆರಿಕೊ ಪೆಕೊರೆಲ್ ಎಂಬಾತ ಇಟಲಿಯ ಪೆಸ್ಕಾರಾ ನಗರದ ಪಿಯಾಝಾ ಸಲೊಟ್ಟೊ ರೆಸ್ಟೋರೆಂಟ್‌ಗೆ ಬಂದಿದ್ದ. ಕಬಾಬ್ ಆರ್ಡರ್ ಮಾಡಿ, ಹೊರಭಾಗದಲ್ಲಿದ್ದ ಟೇಬಲ್ ನಲ್ಲಿ ಕುಳಿತು ಕಾಯುತ್ತಿದ್ದ. ಕಬಾಬ್ ಸರ್ವ್ ಮಾಡಲು ಸ್ವಲ್ಪ ತಡವಾಗಿದೆ. ಜೊತೆಗೆ ಅದರಲ್ಲಿ ಉಪ್ಪು ಕೂಡ ಕಡಿಮೆ ಇತ್ತು. ಇದರಿಂದ ಫೆಡೆರಿಕೊ ಕೋಪಗೊಂಡಿದ್ದಾನೆ.
ಒಳಕ್ಕೆ ಹೋಗಿ ಬಾಣಸಿಗನೊಂದಿಗೆ ಜಗಳವಾಡಿದ್ದಾನೆ. ನಂತರ ಬಂದೂಕು ತೆಗೆದುಕೊಂಡು 23 ವರ್ಷದ ಬಾಣಸಿಗ ಯೆಲ್ಫ್ರಿ ಗಾಜ್ಮನ್ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಟ್ಯಾಕ್ಸಿಯಲ್ಲಿ ಪರಾರಿಯಾಗಿದ್ದಾನೆ. ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದ ಆತನನ್ನ ಪೊಲೀಸರು ಬಂಧಿಸಿದ್ದಾರೆ.
ಆತನ ಬಳಿಯಿದ್ದ ಪಿಸ್ತೂಲ್ ಕೂಡ ವಶಪಡಿಸಿಕೊಂಡಿದ್ದಾರೆ. ಗುಂಡೇಟು ತಿಂದಿದ್ದ ಬಾಣಸಿಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಈಗ ಆತನ ಆರೋಗ್ಯ ಸುಧಾರಿಸುತ್ತಿದೆ. ಈ ಶೂಟೌಟ್ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಗಾಯಗೊಂಡಿರುವ ಬಾಣಸಿಗನಿಗೆ 2 ವರ್ಷದ ಪುಟ್ಟ ಮಗು ಕೂಡ ಇದೆ. 19 ವರ್ಷದವನಿದ್ದಾಗ ಕಾರು ಅಪಘಾತವೊಂದರಲ್ಲಿ ಆತನ ಮೆದುಳಿಗೆ ಏಟಾಗಿತ್ತು.