ಹಳದಿ ಅರಿಶಿನ ನಿಮಗೆಲ್ಲ ಗೊತ್ತೇ ಇದೆ. ಭಾರತದ ಬಹುತೇಕ ಎಲ್ಲಾ ಅಡುಗೆ ಮನೆಗಳಲ್ಲಿ ಅರಿಶಿನ ಚಿರಪರಿಚಿತ. ಅರಿಶಿನ ಇಲ್ಲದೇ ಅನೇಕ ರುಚಿಕರವಾದ ಭಕ್ಷ್ಯಗಳು ಅಪೂರ್ಣವಾಗುತ್ತವೆ. ಆದ್ರೆ ನೀವೆಂದಾದರೂ ಕಪ್ಪು ಅರಿಶಿನದ ಬಗ್ಗೆ ಕೇಳಿದ್ದೀರಾ? ಈ ಮಸಾಲೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಕಪ್ಪು ಅರಿಶಿನವನ್ನು ಮುಖ್ಯವಾಗಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ತ್ವಚೆಯ ಕಾಳಜಿಗೆ ಕೂಡ ಔಷಧಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಸಣ್ಣಪುಟ್ಟ ಗಾಯಗಳು, ಚರ್ಮ ಕಿತ್ತು ಹೋಗಿದ್ರೆ ಅಂತಹ ಗಾಯಗಳಿಗೆ ನಾವು ಅನೇಕ ರೀತಿಯ ಸ್ಕಿನ್ ಕ್ರೀಮ್‌ಗಳನ್ನು ಬಳಸುತ್ತೇವೆ. ಆದರೆ ಈ ಗಾಯಗಳಿಗೆ ಕಪ್ಪು ಅರಿಶಿನ ಪೇಸ್ಟ್ ಹಚ್ಚಿರಿ. ಹೀಗೆ ಮಾಡುವುದರಿಂದ ಗಾಯಗಳು ಬೇಗ ವಾಸಿಯಾಗುತ್ತವೆ.
ಕಪ್ಪು ಅರಿಶಿನವನ್ನು ಹೊಟ್ಟೆಯ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಯಾರಿಗಾದರೂ ಹೊಟ್ಟೆ ನೋವು ಅಥವಾ ಗ್ಯಾಸ್ ಸಮಸ್ಯೆ ಇದ್ದರೆ, ಕಪ್ಪು ಅರಿಶಿನವನ್ನು ಬಳಸಿ. ಕಪ್ಪು ಅರಿಶಿನದ ಪುಡಿಯನ್ನು ಅದನ್ನು ನೀರಿನಲ್ಲಿ ಬೆರೆಸಿಕೊಂಡು ಕುಡಿಯಿರಿ. ಹಳದಿ ಅರಿಶಿನದಂತೆ, ಕಪ್ಪು ಅರಿಶಿನ ಕೂಡ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದನ್ನು ಜೇನುತುಪ್ಪದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಚರ್ಮದ ಹೊಳಪು ಹೆಚ್ಚುತ್ತದೆ.
ಇದರಿಂದ ಮುಖದ ಕಪ್ಪು ಕಲೆಗಳು ಮತ್ತು ಮೊಡವೆಗಳು ಸಹ ಮಾಯವಾಗುತ್ತವೆ. ವಯಸ್ಸಾದಂತೆ ಕೀಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ನೋವು ಹೆಚ್ಚಾದಾಗ ಕಪ್ಪು ಅರಿಶಿನದ ಪೇಸ್ಟ್ ನೋವಿರುವ ಜಾಗಕ್ಕೆ ಹಚ್ಚುಕೊಳ್ಳಿ. ಇದರಲ್ಲಿ ಉತ್ಕರ್ಷಣ ನಿರೋಧಕ ಮತ್ತು ಆಂಟಿಫಂಗಲ್ ಗುಣಗಳಿರುವುದರಿಂದ ನೋವು ಕಡಿಮೆಯಾಗುತ್ತದೆ. ಉರಿಯೂತಕ್ಕೂ ಇದು ಪರಿಹಾರ ನೀಡುತ್ತದೆ.