’83’ ಸಿನಿಮಾದಲ್ಲಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಂದ ಬಾಲಿವುಡ್ ಸೆನ್ಸೇಷನ್ ಆಕ್ಟರ್ ರಣವೀರ್ ಸಿಂಗ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಪಾತ್ರಕ್ಕಾಗಿ ರಣವೀರ್ ಸಿಂಗ್ ಬಹಳ ಪರಿಶ್ರಮ ಹಾಕಿದ್ದು, ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ಇದೀಗ ಬಹಿರಂಗಪಡಿಸಿರೋ ಒಂದು ವಿಚಾರ ಕೇಳಿದ್ರೆ ನೀವು ಖಂಡಿತಾ ಅಚ್ಚರಿ ಪಡ್ತೀರಾ..!
ಹೌದು, ಕಪಿಲ್ ದೇವ್ ಅವರ ಅಂದಿನ ಪ್ರಸಿದ್ಧ ಕ್ಯಾಚ್ ಅನ್ನು ಪರಿಪೂರ್ಣವಾಗಿ ಮಾಡಲು ರಣವೀರ್ ಆರು ತಿಂಗಳು ಅಭ್ಯಾಸ ಮಾಡಿದ್ದಾರೆ. ಜೂನ್ 25, 1983 ರಂದು ಮದನ್ ಲಾಲ್ ಎಸೆತದಲ್ಲಿ ಸರ್ ವಿವ್ ರಿಚರ್ಡ್ಸ್ ಅವರನ್ನು ಔಟ್ ಮಾಡಿದ್ದರು ಕ್ರಿಕೆಟ್ ದಿಗ್ಗದ ಕಪಿಲ್. ಈ ಕ್ಯಾಚ್ ಅನ್ನು ಮರುಸೃಷ್ಟಿಸಲು ರಣವೀರ್ ಸಿಂಗ್ ಆರು ತಿಂಗಳ ಕಠಿಣ ಪರಿಶ್ರಮ ಹಾಕಿದ್ದಾರೆ.
ಅಷ್ಟೇ ಅಲ್ಲ ಕಪಿಲ್ ಅವರು ಹೇಗಿರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಲು ಸ್ವತಃ ರಣವೀರ್ ಸಿಂಗ್ ಅವರ ಮನೆಯಲ್ಲಿ ಕಪಿಲ್ ಜೊತೆಗೆ ಕಾಲ ಕಳೆದಿದ್ದಾರೆ. ಅವರಂತೆ ಬೌಲಿಂಗ್ ಮಾಡಲು ಕಲಿತ ರಣವೀರ್ ಗೆ ಬ್ಯಾಟಿಂಗ್ ಗಿಂತ ಬೌಲಿಂಗ್ ಕಲಿಯುವುದೇ ಕಠಿಣವಾಗಿತ್ತಂತೆ. ಅದರಲ್ಲೂ ಆ ಒಂದು ಕ್ಯಾಚ್ ಅನ್ನು ಅವರು ಹಿಡಿದಿದ್ದ ರೀತಿಯೇ ಹಿಡಿಯಲು ಆರು ತಿಂಗಳು ಬೇಕಾಯಿತು ಎಂದು ನಟ ರಣವೀರ್ ಸಿಂಗ್ ಹೇಳಿದ್ದಾರೆ.
83 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದು, ಅಭಿಮಾನಿಗಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ನಟ ರಣವೀರ್ ಸಿಂಗ್ ಅದ್ಭುತ ಅಭಿನಯಕ್ಕೆ ಮನಸೋತಿದ್ದಾರೆ. ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಮದನ್ ಲಾಲ್, ಕಪಿಲ್ ದೇವ್, ಬಲ್ವಿಂದರ್ ಸಿಂಗ್ ಸಂಧು, ಪಿಆರ್ ಮಾನ್ ಸಿಂಗ್ ಸೇರಿದಂತೆ ಮುಂತಾದವರು ರಣವೀರ್ ಅಭಿನಯವನ್ನು ಪ್ರಶಂಸಿಸಿದ್ದಾರೆ.