ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಗೆ ಸಂಬಂಧಪಟ್ಟಂತೆ ಒಂದೊಂದಾಗಿಯೇ ಆಘಾತಕಾರಿ ಸಂಗತಿಗಳು ಬಯಲಾಗುತ್ತಿವೆ. ಹತ್ಯೆ ನಡೆದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿ ಈ ಘೋರ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು.
ಪಕ್ಕದಲ್ಲೇ ಇರುವ ಮೊಹ್ಸಿನ್‌ನ ಅಂಗಡಿ ಮತ್ತು ಆಸೀಫ್‌ನ ರೂಮಿನಲ್ಲಿ ಈ ಬರ್ಬರ ಕೊಲೆಗೆ ಸ್ಕೆಚ್ ಹಾಕಲಾಗಿತ್ತು. ಶುಕ್ರವಾರವೇ ಮೊಹ್ಸಿನ್ ಹಾಗೂ ಆಸೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕನ್ಹಯ್ಯಾ ಹತ್ಯೆಗೆ ಸಂಬಂಧಪಟ್ಟ ವಿವರಗಳನ್ನೆಲ್ಲ ಖಾಕಿ ಪಡೆ ಬಾಯ್ಬಿಡಿಸ್ತಾ ಇದೆ.
ಈ ಕೊಲೆಗೆ ಸಂಚು ರೂಪಿಸುವಲ್ಲಿ ಮೊಹ್ಸಿನ್ ಹಾಗೂ ಆಸೀಫ್ ಪಾತ್ರವಿರೋದು ಪೊಲೀಸರಿಗೆ ಖಾತ್ರಿಯಾಗಿದೆ. ಆರೋಪಿ ಗೌಸ್ ಮೊಹಮ್ಮದ್ ಹೆಸರಿನಲ್ಲಿ ನೋಂದಣಿಯಾಗಿದ್ದ ಸ್ಕೂಟಿ, ಮೊಹ್ಸಿನ್‌ನ ಅಂಗಡಿಯ ಹೊರಗೆ ಪತ್ತೆಯಾಗಿದೆ. ಕನ್ಹಯ್ಯಾ ಲಾಲ್ ಇರುವ ಸ್ಥಳವನ್ನು ಪತ್ತೆಹಚ್ಚಲು ಇದನ್ನು ಬಳಸಲಾಯಿತು.
ಕನ್ಹಯ್ಯಾ ಲಾಲ್‌ನನ್ನು ಕೊಂದ ಆರೋಪಿಗಳನ್ನು ಜುಲೈ 13 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ನನ್ನು ರಾಜಸ್ಥಾನದ ಉದಯಪುರ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಪ್ರತೀಕಾರ ತೀರಿಸಿಕೊಳ್ಳಲು ರಿಯಾಜ್ ಮತ್ತು ಗೌಸ್, ಟೈಲರ್ ಕನ್ಹಯ್ಯಾ ಲಾಲ್‌ನ ಶಿರಚ್ಛೇದ ಮಾಡಿದ್ದರು. ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡಿರುವುದಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು.
ಈ ಭಯಾನಕ ಕೃತ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕನ್ಹಯ್ಯಾ ಹತ್ಯೆ ಖಂಡಿಸಿ ಉದಯ್ಪುರದಲ್ಲೂ ಪ್ರತಿಭಟನೆಗಳು ನಡೆದಿವೆ. ಜೈಪುರದಲ್ಲಿ ಕೂಡ ಜನಾಕ್ರೋಶ ವ್ಯಕ್ತವಾಗಿದೆ.