ರಾಜಸ್ಥಾನದ ಉದಯಪುರದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಕನ್ನಯ್ಯ ಲಾಲ್ ಎಂಬ ಟೈಲರ್ ಹತ್ಯೆ ಮಾಡಿದ್ದಾರೆ. ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪೂರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಶೇರ್ ಮಾಡಿದ್ದಕ್ಕೆ ಕನ್ನಯ್ಯ ಲಾಲ್ ಹತ್ಯೆ ನಡೆದಿದ್ದು, ಪೈಶಾಚಿಕ ಕೃತ್ಯವೆಸಗಿದ ಬಳಿಕ ವಿಡಿಯೋ ಮಾಡಿರುವ ಹಂತಕರು ಪ್ರಧಾನಿ ನರೇಂದ್ರ ಮೋದಿಯವರಿಗೂ ಜೀವ ಬೆದರಿಕೆ ಹಾಕಿದ್ದಾರೆ.
ಕನ್ನಯ್ಯ ಲಾಲ್ ಹತ್ಯೆ ಬಳಿಕ ಈಗ ಒಂದೊಂದೇ ವಿಷಯಗಳು ಬೆಳಕಿಗೆ ಬರುತ್ತಿದ್ದು, ತನಗೆ ಕೊಲೆ ಬೆದರಿಕೆ ಬರುತ್ತಿರುವ ಕುರಿತು ಪೊಲೀಸರಿಗೆ ಕನ್ನಯ್ಯ ಲಾಲ್ ಮೊದಲೇ ದೂರು ನೀಡಿದ್ದರು ಎಂಬುದು ಈಗ ಬಹಿರಂಗವಾಗಿದೆ. ವಿವಾದಾತ್ಮಕ ಪೋಸ್ಟ್ ಹಾಕಿದ ಸಂಬಂಧ ಜೂನ್ 10 ರಂದು ಕನ್ನಯ್ಯ ಲಾಲ್ ಅವರನ್ನು ಪೊಲೀಸರು ಬಂಧಿಸಿದ್ದು ಬಳಿಕ ಜೂನ್ 11ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅಷ್ಟರಲ್ಲಾಗಲೇ ಕನ್ನಯ್ಯ ಲಾಲ್ ಹಾಕಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಪೋಸ್ಟ್ ಬಳಿಕ ಕನ್ನಯ್ಯ ಲಾಲ್ ಅವರಿಗೆ ಜೀವ ಬೆದರಿಕೆಗಳು ಬರಲಾರಂಭಿಸಿದ್ದು, ಗ್ರೂಪ್ ಒಂದರಲ್ಲಿ ಕನ್ನಯ್ಯ ಲಾಲ್ ಫೋಟೋ ಮತ್ತು ಫೋನ್ ನಂಬರ್ ಶೇರ್ ಮಾಡಿ ಅವರಿಗೆ ಪಾಠ ಕಲಿಸುವುದಾಗಿ ಅದರಲ್ಲಿ ತಿಳಿಸಲಾಗಿತ್ತು. ಹೀಗಾಗಿ ಜೂನ್ 15ರಂದು ಠಾಣೆಗೆ ತೆರಳಿದ್ದ ಕನ್ನಯ್ಯ ಲಾಲ್ ತಮಗೆ ಬರುತ್ತಿದ್ದ ಬೆದರಿಕೆಗಳ ಕುರಿತು ಮಾಹಿತಿ ನೀಡಿದ್ದರು.
ಇಷ್ಟಾದರೂ ಬೆದರಿಕೆಗಳು ನಿಲ್ಲದ ಕಾರಣ ಕನ್ನಯ್ಯ ಲಾಲ್, ಜೂನ್ 17ರಂದು ಮತ್ತೆ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ಸಲ್ಲಿಸಿದ್ದರು. ಅಲ್ಲದೇ ತಾವು ಉದ್ದೇಶಪೂರ್ವಕವಾಗಿ ಪೋಸ್ಟ್ ಹಾಕಿಲ್ಲ. ತಮ್ಮ 8ವರ್ಷದ ಪುತ್ರ ಮೊಬೈಲ್ ನಲ್ಲಿ ಗೇಮ್ ಆಟವಾಡುವಾಗ ಆಕಸ್ಮಿಕವಾಗಿ ಪೋಸ್ಟ್ ಆಗಿದೆ ಎಂದು ತಿಳಿಸಿದ್ದರು. ಅಲ್ಲದೆ ತಮಗೆ ಅಂಗಡಿ ತೆರೆದರೆ ಕೊಲೆ ಮಾಡುವುದಾಗಿ ಬೆದರಿಕೆ ಬಂದಿದೆ. ಹೀಗಾಗಿ ಟೈಲರ್ ಅಂಗಡಿಯನ್ನು ತೆರೆಯಲು ಸಹ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದರು.
ಇಷ್ಟೆಲ್ಲಾ ಮಾಹಿತಿಗಳನ್ನು ಕನ್ನಯ್ಯ ಲಾಲ್ ನೀಡಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕನ್ನಯ್ಯ ಲಾಲ್ ಹತ್ಯೆಯಾದ ಬಳಿಕ ದೂರು ನೀಡಿದರೂ ಕ್ರಮ ಕೈಕೊಳ್ಳದ ಕಾರಣಕ್ಕೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಭನ್ವರ್ ಲಾಲ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಆದರೆ ಅಷ್ಟರಲ್ಲಾಗಲೇ ಮುಸ್ಲಿಂ ಮೂಲಭೂತವಾದಿಗಳು ಕನ್ನಯ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.