ಬೆಂಗಳೂರು: ಇಂದು ರಾಜ್ಯಾದ್ಯಂತ 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ನಾಡಿನುದ್ದಗಲಕ್ಕೂ ಎಲ್ಲೆಲ್ಲೂ ಕನ್ನಡದ ಕಲರವ. ತೆಲುಗು ಪ್ರಭಾವವಿರುವ ಗಡಿನಾಡು ಗೌರಿ ಬಿದನೂರಿನಲ್ಲಿಯೂ ಕನ್ನಡ ಡಿಂಡಿಮ ಮೊಳಗಿದೆ.
ಕನ್ನಡ ಧ್ವಜಾರೋಹಣ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಕುಟುಂಬವೊಂದು ತಮ್ಮ ವಾಹನವನ್ನು ನಿಲ್ಲಿಸಿ ನಾಡಗೀತೆ ಮುಗಿಯುವವರೆಗೂ ಧ್ವನಿಗೂಡಿಸಿ ಗೌರವ ಸಲ್ಲಿಸಿದ ದೃಶ್ಯ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವ್ಯಕ್ತಿಯೊಬ್ಬರು ಕುಟುಂಬ ಸಮೇತರಾಗಿ ವಾಹನದಲ್ಲಿ ಹೋಗುತ್ತಿದ್ದಾಗ ಕನ್ನಡ ಧ್ವಜಾರೋಹಣ ನಡೆಯುತ್ತಿತ್ತು. ಈ ವೇಳೆ ನಾಡಗೀತೆ ಕೇಳುತ್ತಿದ್ದಂತೆ ತಕ್ಷಣ ವಾಹನ ನಿಲ್ಲಿಸಿದ ಅವರು ನಾಡಗೀತೆಗೆ ಧ್ವನಿಯಾಗಿದ್ದಾರೆ. ಅವರನ್ನು ವೇದಿಕೆಗೆ ಕರೆದು ಸಿಹಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಈ ವೇಳೆ ಟ್ರಿಬಲ್ ರೈಡಿಂಗ್, ವಿತೌಟ್ ಹೆಲ್ಮೆಟ್ ಕೇಸುಗಳು ನಗಣ್ಯ ಎನಿಸಿದವು ಎಂದು ಇನ್ಸ್ ಪೆಕ್ಟರ್ ಸತ್ಯ ಹರಿಯಬ್ಬೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ