1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬರು ಮೂರು ವರ್ಷಗಳ ಅವಧಿಯಲ್ಲಿ ಏಳು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಉದ್ಯೋಗ ಅದರಲ್ಲೂ ಸರ್ಕಾರಿ ಉದ್ಯೋಗ ಸಿಗುವುದೇ ಕಷ್ಟ ಎಂಬ ಇಂದಿನ ದಿನಗಳಲ್ಲಿ ತುಮರಿಯ ಶರಾವತಿ ಎಡದಂಡೆಯ ಎಸ್.ಎಸ್. ಬೋಗ್ ಎಂಬ ಕುಗ್ರಾಮದ ರೈತಾಪಿ ಕುಟುಂಬದ ಪುಟ್ಟಪ್ಪ ಹಾಗೂ ಹಾಲಮ್ಮ ದಂಪತಿಯ ಪುತ್ರ 23 ವರ್ಷದ ಶೋಭಿತ್ ಪಿ.ಕೆ. ಈ ಸಾಧನೆ ಮಾಡಿರುವ ಪ್ರತಿಭಾವಂತರಾಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಕೊಡನವಳ್ಳಿ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಇವರು ಪ್ರೌಢ ಶಿಕ್ಷಣವನ್ನು ಕೊಲ್ಲೂರು ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದ್ದರು. ಬಳಿಕ ಸಾಗರದ ಜೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಲಾಲ್ ಬಹದ್ದೂರ್ ಶಾಸ್ತ್ರಿ ಕಲಾ ಮತ್ತು ವಾಣಿಜ್ಯ ಕಾಲೇನಲ್ಲಿ ಪದವಿ ಪೂರೈಸಿದ್ದಾರೆ.
ಕೆಲವೊಂದು ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದರು ಸಹ ಅದನ್ನು ನಿರಾಕರಿಸಿ ಸರ್ಕಾರಿ ಉದ್ಯೋಗ ಪಡೆಯಲೇಬೇಕೆಂಬ ಛಲ ತೊಟ್ಟ ಇವರು, ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ಏಳು ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ.
2019 ರಲ್ಲಿ ನೇರ ದೈಹಿಕ ಪರೀಕ್ಷೆ ವಿದ್ಯುತ್ ಲೈನ್ ಮ್ಯಾನ್, 2019ರ ನವೆಂಬರ್ ನಲ್ಲಿ ಪೊಲೀಸ್ ಕಾನ್ ಸ್ಟೇಬಲ್ (ಸಿವಿಲ್), 2019ರ ಡಿಸೆಂಬರ್ ನಲ್ಲಿ ಪೊಲೀಸ್ ಕಾನ್ ಸ್ಟೇಬಲ್ (ಡಿ ಆರ್), ದ್ವಿತೀಯ ದರ್ಜೆ ಸಹಾಯಕ, ಫೈರ್ ಸಬ್ ಇನ್ಸ್ಪೆಕ್ಟರ್ (ಅಗ್ನಿಶಾಮಕ ದಳ) ಹೀಗೆ ಏಳು ಹುದ್ದೆಗಳಿಗೆ ಆಯ್ಕೆಯಾಗಿದ್ದು, ಇದೀಗ ಅಗ್ನಿಶಾಮಕ ಇಲಾಖೆಯ ಹುದ್ದೆಯಲ್ಲಿ ಮುಂದುವರಿಯಲು ತೀರ್ಮಾನಿಸಿದ್ದಾರೆ.