ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಕನ್ನಡಿಗರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ರಾಜ್ಯದಲ್ಲಿ ಉದ್ಯಮ ಚಟುವಟಿಕೆ ಆರಂಭಿಸುವ ಪ್ರತಿ ಸಂಸ್ಥೆಯು ಸಹ ಸ್ಥಳೀಯ ಕನ್ನಡಿಗರಿಗೆ ಶೇಕಡ 70 ಉದ್ಯೋಗ ನೀಡಬೇಕೆಂಬ ಕಡ್ಡಾಯ ನಿಯಮವನ್ನು ಜಾರಿಗೊಳಿಸಲು ವಿಧೇಯಕ ಮಂಡನೆ ಮಾಡಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಸೋಮವಾರದಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದು, ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶ ಒದಗಿಸುವ ಉದ್ದೇಶದಿಂದ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿದಾಯಕ 2022’ ಅನ್ನು ಡಿಸೆಂಬರ್ ನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಅನುಮೋದನೆ ಪಡೆಯಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಈ ವಿಧೇಯಕ ಈಗಾಗಲೇ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಸಾರ್ವಜನಿಕ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತಿದ್ದು, ಕನ್ನಡ ಸಾಹಿತ್ಯ ಪರಿಷತ್ ಸಹ ಕೆಲವೊಂದು ಸಲಹೆಗಳನ್ನು ನೀಡಿದೆ ಎಂದ ಸಚಿವ ಸುನಿಲ್ ಕುಮಾರ್, ಇವೆಲ್ಲವುಗಳನ್ನು ಕ್ರೂಢೀಕರಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆ ನಡೆಸಿದ ಬಳಿಕ ಶಾಸನ ರೂಪಿಸಲಾಗುತ್ತದೆ ಎಂದಿದ್ದಾರೆ.