ನಿತ್ಯ ಕನ್ನಡಕ ಧರಿಸುವವರ ಮೂಗಿನ ಮೇಲೆ ಒತ್ತು ಬಿದ್ದು ಅಲ್ಲೇ ಕಲೆಗಳು ಮೂಡುತ್ತವೆ. ಮತ್ತೆ ಕೆಲವರ ಮೂಗೇ ಚಟ್ಟೆಯಾಗಿ ಗುಳಿ ಬೀಳುತ್ತದೆ. ಕಾಂಟಾಕ್ಟ್ ಲೆನ್ಸ್ ಗಳನ್ನು ಬಳಸಿ ಕನ್ನಡಕ ದೂರವಿಡುವ ಆಯ್ಕೆಗಳಿದ್ದರೂ ಅದು ಬಲು ದುಬಾರಿ.
ಯಾವ ವಿಧದ ಕನ್ನಡಕವಾದರೂ ಮೂಗಿನ ಹೊಳ್ಳೆಗಳ ಮೇಲೆ ನಿಲ್ಲಲೇ ಬೇಕು. ಅಲ್ಲಿ ನಿಧಾನವಾಗಿಯಾದರೂ ಅದು ಚರ್ಮವನ್ನು ಒತ್ತುತ್ತದೆ. ಕೆಲವೊಮ್ಮೆ ಅದು ಕಿರಿಕಿರಿ ಮಾಡುವುದೂ ಉಂಟು. ಈ ಕಲೆಗಳನ್ನು ಹೋಗಲಾಡಿಸುವ ಮನೆಮದ್ದು ಇಲ್ಲಿದೆ.
ಅಲೋವೆರಾದ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ಮಾತ್ರ ತೆಗೆದುಕೊಳ್ಳಿ. ಇದನ್ನು ನೇರವಾಗಿ ಕಲೆ ಇರುವಲ್ಲಿಗೆ ತಿಕ್ಕಿ. ಹದಿನೈದು ನಿಮಿಷದ ಬಳಿಕ ತೊಳೆಯಿರಿ. ಸತತವಾಗಿ ಹದಿನೈದು ದಿನಗಳ ತನಕ ದಿನಕ್ಕೆರಡು ಬಾರಿ ಹೀಗೆ ಹಚ್ಚಿಕೊಂಡರೆ ಕಲೆ ಮಾಯವಾಗುತ್ತದೆ.
ಅಲೂಗಡ್ಡೆ ತುರಿದು ರಸ ಹಿಂಡಿ ಕಲೆಗಳ ಮೇಲೆ ಹಚ್ಚುವುದರಿಂದಲೂ ಇವು ಕ್ರಮೇಣ ಇಲ್ಲವಾಗುತ್ತವೆ. ಕನ್ನಡಕ ಇಡುವ ಜಾಗದಲ್ಲಿ ಉರಿಯುತ್ತಿದ್ದರೆ ಅಥವಾ ಗಾಯಗಳಾಗಿದ್ದರೆ ಸೌತೆಕಾಯಿ ರಸವನ್ನು ಹಿಂಡಿ ಅಥವಾ ವೃತ್ತಾಕಾರವಾಗಿ ಕತ್ತರಿಸಿಕೊಂಡು ಅಲ್ಲಿಗೆ ಮಸಾಜ್ ಮಾಡಿ. ಇದನ್ನೂ ಎರಡು ವಾರಗಳ ಕಾಲ ಸತತವಾಗಿ ಮುಂದುವರಿಸಿ.
ಲಿಂಬೆರಸ, ಜೇನು, ರೋಸ್ ವಾಟರ್ ಬೆರೆಸಿ ನಿತ್ಯ ಹಚ್ಚುವುದರಿಂದಲೂ ಕಲೆಗಳು ದೂರವಾಗುತ್ತವೆ. ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಲೆಗಳೂ ಮಾಯವಾಗುತ್ತವೆ.