ಅನೇಕರು ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರನ್ನು ಇದು ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ನೋವಲ್ಲ. ಆದರೆ ನಿರ್ಲಕ್ಷಿಸುವಂತಹದ್ದಲ್ಲ.
ಕತ್ತು ನೋವಿಗೆ ಅನೇಕ ಕಾರಣಗಳಿವೆ. ಸರಿಯಾದ ಭಂಗಿಯಲ್ಲಿ ಮಲಗದಿದ್ದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ತಲೆ ದಿಂಬು ಸರಿಯಾಗಿಲ್ಲದಿದ್ದರೂ ಈ ನೋವು ಬರುತ್ತದೆ.
ಕಚೇರಿಯಲ್ಲಿ ಒಂದೇ ಕಡೆ ಕುಳಿತು, ತಲೆ ಬಗ್ಗಿಸಿ ಕೆಲಸ ಮಾಡಿದರೂ ಈ ನೋವು ಕಾಣಿಸಿಕೊಳ್ಳುತ್ತದೆ. ಒತ್ತಡ ಹೆಚ್ಚಾದಾಗಲೂ ಈ ಸಮಸ್ಯೆ ಬರುತ್ತದೆ. ಭಾರ ಎತ್ತುವಾಗ ಸ್ನಾಯುಗಳಿಗೆ ಆಯಾಸವಾಗಿ ಅಥವಾ ಉಳುಕಿ ಹೀಗಾಗುವುದುಂಟು.
ಈ ನೋವು ಸಾಮಾನ್ಯವಾಗಿ ಬರುವಂತಹದ್ದು. ಪ್ರತಿ ಬಾರಿ ಔಷಧಿ ಮೊರೆ ಹೋಗುವುದು ಒಳ್ಳೆಯದಲ್ಲ. ನೋವಿನ ಮಾತ್ರೆಗಳನ್ನು ಪ್ರತಿದಿನ ಸೇವಿಸುವುದಂತೂ ತುಂಬಾ ಅಪಾಯಕಾರಿ. ಹಾಗಾಗಿ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಒಳಿತು. ನೋವು ಕಂಡು ಬಂದಾಗ ಬಿಸಿ ನೀರಿನ ಚೀಲವನ್ನು ಇಟ್ಟುಕೊಳ್ಳಬಹುದು. ಆಕ್ಯುಪ್ರೆಶರ್ ಅಥವಾ ಕಾಂತೀಯ ಚಿಕಿತ್ಸೆ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ವಿಟಮಿನ್ ಡಿ ಜೀವಸತ್ವ ಕೊರತೆಯಿಂದಲೂ ಈ ನೋವು ಕಾಣಿಸಿಕೊಳ್ಳಬಹುದು. ತುಂಬಾ ಸಮಯದಿಂದ ಕತ್ತು ನೋವು ಬರುತ್ತಿದ್ದರೆ ಕತ್ತಿಗೆ ಸಂಬಂಧಪಟ್ಟ ವ್ಯಾಯಾಮ ಮಾಡಿ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.