ಬೇಸಿಗೆ ಮತ್ತು ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಕಾಳಜಿ ಬೇಕು. ಯಾಕಂದ್ರೆ ಪ್ರಬಲವಾದ ಸೂರ್ಯನ ಬೆಳಕು ಮತ್ತು ಬೆವರುವಿಕೆಯಿಂದ ಚರ್ಮವು ಕಪ್ಪಾಗುತ್ತದೆ. ಟ್ಯಾನಿಂಗ್‌ನಿಂದ ಮುಖವನ್ನು ರಕ್ಷಿಸಲು ಸಾಕಷ್ಟು ಹರಸಾಹಸಪಡುತ್ತೇವೆ. ಆದ್ರೆ ಕುತ್ತಿಗೆ ಭಾಗವನ್ನು ನಿರ್ಲಕ್ಷಿಸಿಬಿಡುತ್ತೇವೆ. ಪರಿಣಾಮ ಕುತ್ತಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕುತ್ತಿಗೆಯ ಮೇಲಿನ ಈ ಕರಿಛಾಯೆ ಇಡೀ ಮುಖದ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಕತ್ತಿನ ಮೇಲೆ ಕೆಸರು ಕೂತು ಅಸಹ್ಯವಾಗಿ ಕಾಣುತ್ತದೆ. ಅದನ್ನು ಮನೆಯಲ್ಲೇ ಸುಲಭವಾಗಿ ತೆಗೆದುಹಾಕುವುದು ಹೇಗೆ ಅನ್ನೋದನ್ನು ನೋಡೋಣ.
ನಿಂಬೆ ಮತ್ತು ಜೇನುತುಪ್ಪ: ಒಂದು ಚಮಚ ನಿಂಬೆ ರಸ ಮತ್ತು ಸ್ವಲ್ಪ ಜೇನುತುಪ್ಪವನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕುತ್ತಿಗೆಯ ಮೇಲಿರುವ ಕಪ್ಪನೆಯ ಭಾಗದ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಕಲ್ಮಶವೆಲ್ಲ ಹೋಗಿ ಕುತ್ತಿಗೆ ಶುಭ್ರವಾಗುತ್ತದೆ.
ಹಾಲು, ಅರಿಶಿನ ಮತ್ತು ಕಡಲೆಹಿಟ್ಟು: ಒಂದು ಚಮಚ ಹಾಲು, ಚಿಟಿಕೆ ಅರಿಶಿನ ಮತ್ತು ಕಡಲೆ ಹಿಟ್ಟನ್ನು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕತ್ತಿಗೆ ಹಚ್ಚಿಕೊಂಡು ಅದು ಒಣಗುವವರೆಗೂ ಹಾಗೇ ಬಿಡಿ. ನಂತರ ಕುತ್ತಿಗೆಯನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದನ್ನು ಕೆಲವು ದಿನಗಳವರೆಗೆ ಮಾಡಿದರೆ ಬಯಸಿದ ಫಲಿತಾಂಶ ಸಿಗುತ್ತದೆ.
ನಿಂಬೆ ಮತ್ತು ಕಡಲೆಹಿಟ್ಟು : ಒಂದು ಬೌಲ್‌ನಲ್ಲಿ ನಿಂಬೆ ರಸ ಮತ್ತು ಕಡಲೆಹಿಟ್ಟನ್ನು ಹಾಕಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕತ್ತಿಗೆ ಹಚ್ಚಿಕೊಳ್ಳಿ, ಸ್ವಲ್ಪ ಸಮಯ ಹಾಗೇ ಬಿಡಿ. ಅದು ಒಣಗಿದ ನಂತರ ತೊಳೆದುಕೊಳ್ಳಿ.
ಮೊಸರು ಮತ್ತು ಹಸಿ ಪಪ್ಪಾಯ: ಮೊದಲಿಗೆ ಹಸಿ ಪಪ್ಪಾಯವನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಅದಕ್ಕೆ ಮೊಸರು ಮತ್ತು ರೋಸ್ ವಾಟರ್ ಅನ್ನು ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕುತ್ತಿಗೆಗೆ ಹಚ್ಚಿಕೊಂಡು ಒಣಗಲು ಬಿಡಿ. ನಂತರ ಶುಭ್ರ ನೀರಿನಿಂದ ತೊಳೆದರೆ ಕುತ್ತಿಗೆಯ ಮೇಲಿನ ಕೊಳೆ ನಿವಾರಣೆಯಾಗುತ್ತದೆ.