ಇಂದಿನ ಐಟಿ- ಬಿಟಿ ಯುಗದಲ್ಲಿ ಎಲ್ಲಿ ಮರೆಯಾಗಿದೆ ಗುಡಿ ಕೈಗಾರಿಕೆ..? ಹೀಗೊಂದು ಪ್ರಶ್ನೆ ಉದ್ಭವಿಸುವುದು ಸಹಜ. ಯಾಕೆಂದರೆ ಅದೊಂದು ಕಾಲದಲ್ಲಿ ಗ್ರಾಮೀಣ ಜನರ ನಿತ್ಯದ ಕಾಯಕವಾಗಿತ್ತು ಈ ಗುಡಿ ಕೈಗಾರಿಕೆ.
ಎಲ್ಲಿ ನೋಡಿದರಲ್ಲಿ ತೆಂಗಿನ ಪೊರಕೆ, ನೆಲಹಾಸು, ಹಗ್ಗ ತಯಾರಿಕೆ, ಅಡಿಕೆ ಪಟ್ಟೆಯಲ್ಲಿ ದೊನ್ನೆ ತಟ್ಟೆ ತಯಾರಿ, ಗಂಧದ ಕಡ್ಡಿ, ಮೇಣದ ಬತ್ತಿ, ಚಾಪೆ ಹೆಣೆಯುವುದು, ಬಿದಿರು ಬುಟ್ಟಿಗಳನ್ನು ತಯಾರಿಸುವುದು, ಸೀಮೆಸುಣ್ಣ ತಯಾರಿಕಾ ಘಟಕಗಳು ತಲೆ ಎತ್ತಿದ್ದವು. ಆದರೆ ಈಗ ಎಲ್ಲಿ ನೋಡಿದರೂ ಕಾಂಕ್ರಿಟ್ ಕಾಡು. ಸಿಮೆಂಟ್ ಗೂಡುಗಳ ರಾಶಿ ರಾಶಿ. ಇದರಿಂದಾಗಿ ಕಾಣದಂತೆ ಮರೆಯಾಗಿದೆ ಗುಡಿ ಕೈಗಾರಿಕೋದ್ಯಮಗಳು.
ಬಿದಿರಿನ ಬುಟ್ಟಿ, ಕೇರುವ ಮರ, ಬಿದಿರಿನ ಕೊಳಲು, ಬೀಸಣಿಕೆ, ಹೂವಿನ ಬುಟ್ಟಿ, ಮಂಕರಿ(ಕುಕ್ಕೆ), ಬಿದಿರಿನ ಚಾಪೆ, ಪೆಂಟೆ (ಹಳೆಯ ಕಾಲದ ಮಾಳಿಗೆ ಮನೆಗೆ ಮೇಲೆ ಹಾಕುವುದಕ್ಕೆ ಬಿದಿರಿನ ನಡುಚಾಪೆ) ತಡಿಕೆ ಗೋಡೆಗೆ ಒಳಭಾಗಕ್ಕೆ ಹಾಕುವ ಅಡ್ಡ ಚಾಪೆಗಳನ್ನು ಮೇದಾರ ಎಂದು ಕರೆಸಿಕೊಳ್ಳುವ ಜನಾಂಗದವರು ಮುನ್ನೂರು, ನಾನೂರು ವರ್ಷಗಳಿಂದ ಬಿದಿರಿನ ಸಾಮಾನುಗಳನ್ನು ಮಾಡಿ ಅದನ್ನು ಮಾರಿ ಜೀವನ ಸಾಗಿಸುತ್ತಾ ಬಂದಿದ್ದಾರೆ.
ಈ ಜನಾಂಗ ಕಾಡುಗಳ ಅಕ್ಕಪಕ್ಕದಲ್ಲಿ ಅರಣ್ಯ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಕಾಲ ಬದಲಾವಣೆಯಾದಂತೆ ಈಗ ಎಲ್ಲೆಡೆ ನೆಲೆಸಲಾರಂಭಿಸಿ, ಈಗಲೂ ಜೀವನ ನಿರ್ವಹಣೆಗೆ ಬಿದಿರಿನ ವಸ್ತುಗಳ ಮಾರಾಟವನ್ನೇ ಅವಲಂಬಿಸಿದ್ದಾರೆ. ಹಿಂದೆ ಬಿದಿರಿಗೆ ಈ ಜನಾಂಗ ಕಷ್ಟಪಡಬೇಕಾಗಿರಲಿಲ್ಲ, ಕಾಡಿನಲ್ಲಿ ಸುತ್ತ ತಮಗೆ ಅಗತ್ಯವಿರುವ ಎಳಸಾಗಿರುವ ಬಿದಿರುಗಳನ್ನು ಸಂಗ್ರಹಿಸಿಕೊಂಡು ವಸ್ತುಗಳನ್ನು ಮಾಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಈಗ ಅರಣ್ಯ ಇಲಾಖೆಯ ಕಟ್ಟುಪಾಡಿಗೆ ಸರ್ಕಾರದ ಅನುಮತಿ, ಪರವಾನಗಿ ಇಲ್ಲದೆ ಅರಣ್ಯದಲ್ಲಿ ಬಿದಿರು ಕಡಿಯುವಂತಿಲ್ಲ, ಪರವಾನಗಿ ಪಡೆದವರ ಹತ್ತಿರ ಕೊಂಡು ತರಬೇಕಾಗಿದೆ.
ಇಂದಿನ ತಾಂತ್ರಿಕ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿದ್ದು, ಬಿದಿರಿನ ಬಳಕೆ ಕಡಿಮೆಯಾಗಿದೆ. ಬಿದಿರಿನ ವಸ್ತುಗಳ ಜಾಗಕ್ಕೆ ಪ್ಲಾಸ್ಟಿಕ್ ಕೇರುವ ಮರ, ಬುಟ್ಟಿ, ಕುಕ್ಕೆ, ಮಂಕರಿ ಬಂದಿದ್ದು ತುಂಬಾ ಅಪಾಯಕಾರಿಯಾಗಿದೆ. ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಬಳಕೆ ಹಾನಿಕರ.