‘ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ…. ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ’ ಎನ್ನುವಂತೆ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಜೀವನದಲ್ಲೊಮ್ಮೆ ಕಣ್ತುಂಬಿಕೊಳ್ಳಬೇಕು.
ಮಳೆಗಾಲದಲ್ಲಿ ಜೋಗದ ವೈಭವವನ್ನು ಕಾಣಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾಜ, ರಾಣಿ, ರೋರರ್, ರಾಕೆಟ್ ಜಲಧಾರೆಗಳ ಮೂಲಕ ಧುಮ್ಮಿಕ್ಕುವ ನೀರನ್ನು ಮಳೆಗಾಲದಲ್ಲಿ ನೋಡಿಯೇ ಆನಂದಿಸಬೇಕು.
ಹಸಿರ ಕಣಿವೆಯಲ್ಲಿ ಮೋಡ, ಮಳೆಯ ನಡುವೆ ಆಗಾಗ ಮರೆಯಾಗುವ ಹಾಲಿನಂತಹ ನೀರಿನ ಜಲಧಾರೆ ದೃಶ್ಯ ವೈಭವವನ್ನು ನೋಡಲು 2 ಕಣ್ಣುಗಳು ಸಾಲದೆನಿಸುತ್ತವೆ.
ಮಳೆ ಮಂಜಿನ ಆಟದಲ್ಲಿ ಆಗಾಗ ಮರೆಯಾಗುವ ಜಲಧಾರೆಯ ನೋಟ ಬಿಸಿಲು ಕಣಿವೆಯಲ್ಲಿ ಹೊಸ ಲೋಕವನ್ನೇ ಸೃಷ್ಠಿಸುತ್ತವೆ.
ಬೇಸಿಗೆಯಲ್ಲಿ ಬಣಗುಡುವ ಜೋಗದ ವೈಭವ ಮುಂಗಾರಿನ ವೇಳೆಗೆ ಮರುಕಳಿಸುತ್ತದೆ. ಜಲಧಾರೆಗಳು ಜೀವಕಳೆ ಪಡೆದುಕೊಳ್ಳುತ್ತವೆ.
ಮಳೆಗಾಲದಲ್ಲಿ ಧುಮ್ಮಿಕ್ಕುವ ಜಲಧಾರೆಯನ್ನು ಕಣ್ತುಂಬಿಕೊಂಡರೆ, ಏನೋ ಉಲ್ಲಾಸವಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಸಿಗುವ ಜೋಗದ ಜಲಧಾರೆಯನ್ನು ನೋಡಲು ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ.
ಭಾನುವಾರ ಪ್ರವಾಸಿಗರ ದಂಡೇ ಜೋಗದಲ್ಲಿ ನೆರೆದಿರುತ್ತದೆ. ಜೋಗದ ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದು ಹೋದರೆ, ಅನುಕೂಲವಾಗುತ್ತದೆ. ನೀವು ಒಮ್ಮೆ ಜಲಧಾರೆಯ ವೈಭವವನ್ನು ನೋಡಿ ಬನ್ನಿ.