ಮೈಸೂರಿನಿಂದ 120 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿಲೋ ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಜೊತೆಗೆ ಪ್ರವಾಸಿ ಸ್ಥಳ ಕೂಡ ಆಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಈ ಪ್ರದೇಶದಲ್ಲಿ ಬಿಳಿಕಲ್ಲುಗಳು ಹೆಚ್ಚಿರುವುದರಿಂದ ಇದನ್ನು ಬಿಳಿಗಿರಿ ಎಂದು ಕರೆಯಲಾಗುತ್ತದೆ. ಎತ್ತರದ ಬೆಟ್ಟ ವಿಹಂಗಮ ಸ್ಥಳವಾಗಿದೆ. ಚಾಮರಾಜನಗರ ಹಾಗೂ ಯಳಂದೂರು ಮಾರ್ಗದಲ್ಲಿ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಬೆಟ್ಟದಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯ ಇದೆ. ಋಷಿಮುನಿಗಳ ಮೂರ್ತಿಗಳು, ದೇವರ ಮೂರ್ತಿಗಳು ಇದ್ದು, ಶ್ರೀರಂಗನಾಥ ಸ್ವಾಮಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ. ಇದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ರಾತ್ರಿ ವೇಳೆ ಸಂಚಾರ ಮಾಡದಿರುವುದು ಸೇಫ್.
ಬೆಂಗಳೂರು, ಮೈಸೂರು, ಯಳಂದೂರು ಹಾಗೂ ಚಾಮರಾಜನಗರದಿಂದ ಬಸ್ ಸೌಲಭ್ಯ ಇದೆ. ಬೆಟ್ಟವನ್ನು ಪ್ರವೇಶಿಸಿದ ಕೂಡಲೇ ತಂಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ. ಕಾಡುಪ್ರಾಣಿಗಳು, ಅಪರೂಪದ ಸಸ್ಯ ಪ್ರಬೇಧಗಳು ಈ ಪ್ರದೇಶದಲ್ಲಿವೆ. ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿದ್ದು, ಅಲ್ಲಿಗೂ ಭೇಟಿ ನೀಡಬಹುದಾಗಿದೆ.