ನಿಮ್ಮ ಕಣ್ಣು ಹೊಡೆದುಕೊಳ್ಳುತ್ತಿದೆಯೇ…? ಮನೆಯ ಹಿರಿಯರು ಇದು ಯಾವ ಶಕುನದ ಫಲ ಎಂಬ ಜಿಜ್ಞಾಸೆಯಲ್ಲಿ ತೊಡಗಿದ್ದಾರೆಯೇ..? ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂಬುದು ನಿಮಗೆ ನೆನಪಿರಲಿ.
ಕಣ್ಣಿನ ರೆಪ್ಪೆಗಳು ಹಾರಲು ಈ ಕೆಲವು ಮುಖ್ಯ ಕಾರಣಗಳು ನಿಮ್ಮನ್ನು ಬಹುವಾಗಿ ಕಾಡಿರಬಹುದು. ಅವುಗಳೆಂದರೆ ಕಣ್ಣಿನ ಮೇಲೆ ಅಧಿಕ ಒತ್ತಡ. ಒಂದು ವೇಳೆ ವಿಪರೀತ ಕಂಪ್ಯೂಟರ್ ನೋಡಿ ಕೆಲಸ ಮಾಡಿದ್ದರೆ, ಮೊಬೈಲ್ ಅತಿಯಾಗಿ ವೀಕ್ಷಿಸಿದ್ದರೆ ಕಣ್ಣು ಹೊಡೆದುಕೊಳ್ಳಬಹುದು.
ನಿಮಗೆ ವಿಪರೀತ ಸುಸ್ತು ಅಥವಾ ಆಯಾಸವಾಗಿದ್ದರೂ ಈ ಲಕ್ಷಣಗಳು ಕಂಡು ಬರಬಹುದು. ನಿದ್ರಾ ಹೀನತೆಯಿಂದಲೂ ನಿಮ್ಮ ಕಣ್ಣುಗಳಿಗೆ ವಿಪರೀತ ಆಯಾಸವಾಗಿ ಕಣ್ರೆಪ್ಪೆ ಅದುರುತ್ತಿರಬಹುದು.
ಹೆಚ್ಚು ಪ್ರಕಾಶವಿರುವ ಬಲ್ಬ್ ಗಳಿಗೆ ನೀವು ಒಮ್ಮೆಲೇ ಒಡ್ಡಿಕೊಂಡಾಗಲೂ ಇದೇ ಅನುಭವವಾಗುತ್ತದೆ. ಇನ್ನು ವಿಪರೀತ ಕಾಫಿ, ಚಹಾ ಕುಡಿಯುವುದು, ಆಲ್ಕೋಹಾಲ್ ಸೇವಿಸುವುದು, ಕೆಲವು ಡ್ರಗ್ಸ್ ಗಳ ಅಡ್ಡ ಪರಿಣಾಮದಿಂದ ಹೀಗಾಗಬಹುದು.
ಪೋಷಕಾಂಶಗಳ ಕೊರತೆ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ವೈದ್ಯರು. ಶರೀರದಲ್ಲಿ ಪೊಟ್ಯಾಶಿಯಂ ಕೊರತೆ ಉಂಟಾದಾಗಲೂ ಹೀಗಾಗುತ್ತದೆ. ಇದು ಹದಿನೈದು ದಿನಗಳ ತನಕ ಹೀಗೆ ಬಿಡದೆ ಕಾಡುತ್ತಿದ್ದರೆ ನೀವು ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.