ಕಣ್ಣುಗಳು ನಮ್ಮ ಮುಖದ ಅತ್ಯಂತ ಸೂಕ್ಷ್ಮವಾದ ಭಾಗ. ಕಣ್ಣುಗಳ ಮೇಲೆ ಒಂದು ಸಣ್ಣ ಗಾಯವಾದ್ರೂ ನಿಮ್ಮ ದೃಷ್ಟಿಗೇ ಅಪಾಯವಾಗಬಹುದು. ಹಾಗಾಗಿ ಕಣ್ಣುಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಜನರು ಫ್ಯಾಶನ್ ಅಥವಾ ದೃಷ್ಟಿ ಹೀನತೆಯಿಂದಾಗಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುತ್ತಾರೆ. ಈ ಕಾಂಟ್ಯಾಕ್ಟ್ ಲೆನ್ಸ್‌ಗಳು ನಿಮಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆಯುವಾಗ ಅಥವಾ ಹಾಕುವಾಗ ಕೊಂಚ ಎಡವಿದ್ರೂ ನಿಮ್ಮ ಕಣ್ಣುಗಳಿಗೆ ಹಾನಿಯಾಗುತ್ತದೆ. ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ದೀರ್ಘಕಾಲದವರೆಗೆ ಧರಿಸುವುದು ಕೂಡ ಅಪಾಯಕಾರಿ. ಕೆಲವೊಮ್ಮೆ ಬೆಳಗ್ಗೆಯಿಂದ ರಾತ್ರಿವರೆಗೂ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕಿಕೊಂಡಿರ್ತೀರಾ. ಇದರಿಂದ ಸಾಕಷ್ಟು ಅನಾನುಕೂಲತೆಗಳಾಗುತ್ತವೆ.
ಕಣ್ಣಿನ ಕಾಯಿಲೆಗಳ ಅಪಾಯ
ನೀವು ದೀರ್ಘಸಮಯದವರೆಗೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಿದರೆ ಅದು ಕಣ್ಣುಗಳಲ್ಲಿ ಕಿರಿಕಿರಿಯನ್ನು ಉಂಟು ಮಾಡಬಹುದು. ಕಣ್ಣಿನ ಸೋಂಕುಗಳಿಗೆ ಕಾರಣವಾಗಬಹುದು. ಇದಲ್ಲದೆ ದೃಷ್ಟಿ ಮಂದವಾಗುವುದು ಮತ್ತು ಕಾರ್ನಿಯಾ ಸಂಬಂಧಿತ ಸಮಸ್ಯೆಗಳಂತಹ ಹಲವಾರು ತೊಂದರೆಗೆ ನೀವು ತುತ್ತಾಗುವ ಸಾಧ್ಯತೆ ಇರುತ್ತದೆ.
ಕಣ್ಣು ಕೆಂಪಾಗುವುದು
ನಿಮ್ಮ ಕಣ್ಣುಗಳಿಗೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹಾಕುವುದರಿಂದ ಕಣ್ಣುಗಳು ಕೆಂಪಗಾಗುವ ಸಾಧ್ಯತೆ ಇರುತ್ತದೆ. ಕಣ್ಣು ಕೆಂಪಾದರೆ ನಿಮ್ಮ ದೃಷ್ಟಿಗೆ ಹಾನಿಯಾಗುತ್ತಿದೆ ಎಂದರ್ಥ. ಪದೇ ಪದೇ ಇದೇ ರೀತಿ ಕಣ್ಣು ಕೆಂಪಾಗುತ್ತಿದ್ದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಕಣ್ಣಿನ ಹುಣ್ಣು
ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ದೀರ್ಘಕಾಲದವರೆಗೆ ಇರಿಸಿಕೊಂಡರೆ ಅದರಿಂದ ಕಣ್ಣುಗಳಲ್ಲಿ ಹುಣ್ಣುಗಳಿಗೆ ಕಾರಣವಾಗಬಹುದು. ಗುಳ್ಳೆಗಳು ನಿಮ್ಮ ಕಾರ್ನಿಯಾದ ಮೇಲೆ ಬಿಳಿ ಅಥವಾ ಕಂದು ಬಣ್ಣದಲ್ಲಿ ತೆರೆದ ಗಾಯದಂತೆ ಕಾಣುತ್ತವೆ. ಕಣ್ಣುಗಳಲ್ಲಿ ಹುಣ್ಣಾದ್ರೆ ತುಂಬಾ ನೋವಿರುತ್ತದೆ. ಇದರಿಂದಾಗಿ ಕಣ್ಣುಗಳನ್ನು ತೆರೆಯುವುದು ಮತ್ತು ಮುಚ್ಚುವುದೇ ಕಷ್ಟವಾಗಬಹುದು. ಹಾಗಾಗಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹೆಚ್ಚಾಗಿ ಧರಿಸದೇ ಇರುವುದು ಉತ್ತಮ.