ಕಣ್ಣುಗಳು ನಮ್ಮ ದೇಹದ ಅತ್ಯಂತ ಮಹತ್ವದ ಅಂಗಗಳು. ಕಣ್ಣುಗಳ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಲೇ ಬೇಕು. ಯಾಕೆಂದರೆ ದೃಷ್ಟಿಯೇ ಇಲ್ಲದಿದ್ದರೆ ಬದುಕೇ ಅಂಧಕಾರದಲ್ಲಿ ಮುಳುಗಿಬಿಡುತ್ತದೆ. ಕಣ್ಣುಗಳಲ್ಲಿ ಸ್ವಲ್ಪ ಧೂಳು, ಮಣ್ಣು ಸೇರಿದರೂ ಸಮಸ್ಯೆ ಖಚಿತ.
ಆದರೆ ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯದಿಂದ ಕಣ್ಣುಗಳು ದುರ್ಬಲವಾಗುತ್ತವೆ. ವಾಸ್ತವವಾಗಿ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುವುದರಿಂದ, ಬಿಸಿಲಿನಲ್ಲಿ ಸನ್‌ಗ್ಲಾಸ್ ಧರಿಸದೇ ಇರುವುದರಿಂದ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸದಿರುವುದು ಕಣ್ಣಿನ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಕೆಲವು ನಿರ್ದಿಷ್ಟ ಆಹಾರಗಳನ್ನು ನಿತ್ಯ ಸೇವಿಸಿದರೆ ನಮ್ಮ ಕಣ್ಣುಗಳು ಹದ್ದಿನಂತೆ ಚುರುಕಾಗುತ್ತವೆ.
ಪಾಲಕ್ ಸೊಪ್ಪು: ಆರೋಗ್ಯಕರ ತರಕಾರಿಗಳ ವಿಷಯಕ್ಕೆ ಬಂದರೆ ಪಾಲಕ್ ಸೊಪ್ಪು ನಂಬರ್ ವನ್ ಸ್ಥಾನದಲ್ಲಿರುತ್ತದೆ. ಇದರಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಹೆಚ್ಚಿಸಲು ತುಂಬಾ ಸಹಾಯ ಮಾಡುತ್ತದೆ. ಪಾಲಕ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯಕರ ದೃಷ್ಟಿಗೆ ಅವಶ್ಯಕ. ಈ ಕಾರಣಕ್ಕಾಗಿ ಇದನ್ನು ನಿಯಮಿತವಾಗಿ ತಿನ್ನಲು ಸಲಹೆ ನೀಡಲಾಗುತ್ತದೆ.
ಕ್ಯಾರೆಟ್: ಕ್ಯಾರೆಟ್ ಯಾವುದೇ ಸೂಪರ್‌ಫುಡ್‌ಗಳಿಗಿಂತ ಕಡಿಮೆಯಿಲ್ಲ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ರಾತ್ರಿ ಕುರುಡುತನದ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ದೃಷ್ಟಿ ಕೂಡ ಮೊದಲಿಗಿಂತ ಉತ್ತಮವಾಗಿರುತ್ತದೆ.
ಫ್ಯಾಟಿ ಫಿಶ್: ಮಾಂಸಾಹಾರ ಸೇವಿಸುವವರಿಗೆ ಸಾಲ್ಮನ್ ಮತ್ತು ಟ್ಯೂನ ಮೀನುಗಳಂತಹ ಫ್ಯಾಟಿ ಫಿಶ್‌ಗಳು ಬಹಳ ಒಳ್ಳೆಯದು. ಈ ಮೀನುಗಳು ಕಣ್ಣಿಗೆ ಉತ್ತಮ ಔಷಧಿ. ಇವು ರೆಟಿನಾದ ಆರೋಗ್ಯವನ್ನು ಸುಧಾರಿಸುತ್ತವೆ. ಜೊತೆಗೆ ಕಣ್ಣುಗಳ ಡ್ರೈನೆಸ್ ಮತ್ತು ಕಣ್ಣಿನ ಪೊರೆ ಅಪಾಯವನ್ನು ಕಡಿಮೆ ಮಾಡುತ್ತವೆ.
ಮೊಟ್ಟೆ: ನಮ್ಮಲ್ಲಿ ಹಲವರು ಬೆಳಗಿನ ಉಪಾಹಾರಕ್ಕೆ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಇದನ್ನು ಸಾಮಾನ್ಯವಾಗಿ ಪ್ರೋಟೀನ್‌ನ ಮೂಲವಾಗಿ ಸೇವಿಸಲಾಗುತ್ತದೆ. ಮೊಟ್ಟೆಯಲ್ಲಿರುವ ವಿಟಮಿನ್ ಇ, ಲುಟೀನ್ ಮತ್ತು ಸತುವು ಕಣ್ಣುಗಳಿಗೆ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ನೀವು ದಿನಕ್ಕೆ 2 ಮೊಟ್ಟೆಗಳನ್ನು ತಿಂದರೆ ಕಣ್ಣುಗಳು ಆರೋಗ್ಯಕರವಾಗಿರುತ್ತವೆ.