ಕೆಲವೊಮ್ಮೆ ಕಣ್ಣುಗಳಲ್ಲಿ ಇದ್ದಕ್ಕಿದ್ದಂತೆ ಊತ ಕಾಣಿಸಿಕೊಳ್ಳುತ್ತದೆ. ಅದು ಸಾಮಾನ್ಯ ಎಂದುಕೊಂಡು ನಾವು ನಿರ್ಲಕ್ಷಿಸಿಬಿಡುತ್ತೇವೆ. ಆದರೆ ಕಣ್ಣುಗಳಲ್ಲಿನ ಊತ ಕೂಡ ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು. 43 ವರ್ಷದ ಸಿಯಾರನ್ ಮೋರ್ಗನ್ ಎಂಬ ಮಹಿಳೆಯೇ ಇದಕ್ಕೆ ಸಾಕ್ಷಿ. ಈಕೆಯ ಬಲಗಣ್ಣು ತುಂಬಾ ಊದಿಕೊಂಡಿತ್ತು. ಹೆಚ್ಚಿನ ಜನರಂತೆ ಅವಳೂ ಸಹ ಇದನ್ನು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಿದ್ದಳು. ಆದರೆ ನಿಜವಾದ ಕಾರಣ ತಿಳಿದಾಗ ಆಕೆ ಅಕ್ಷರಶಃ ಬೆಚ್ಚಿಬಿದ್ದಿದ್ದಳು.
ಮಹಿಳೆಯ ಬಲಗಣ್ಣು ಊದಿಕೊಂಡು, ಅದರಿಂದ ನೀರು ಬರುತ್ತಿತ್ತು. ವೈದ್ಯರು ಇದೊಂದು ಸಾಮಾನ್ಯ ಇನ್ಫೆಕ್ಷನ್ ಎಂದು ಹೇಳಿದ್ದರು. ಆದರೆ ಮಹಿಳೆಗೆ ಸಮಾಧಾನವಾಗಲೇ ಇಲ್ಲ, ಆಕೆ ಆಪ್ಟಿಶಿಯನ್ ಅನ್ನು ಭೇಟಿಯಾದಳು, ಅವರು ಕೂಡ ಸಾಮಾನ್ಯ ಸೋಂಕು ಇರಬಹುದೆಂದು ಹೇಳಿದ್ದರು. ಕಣ್ಣಿನಲ್ಲಿನ ಊತ ಕಡಿಮೆಯಾಗಲೇ ಇಲ್ಲ. ಇದರ ಜೊತೆಗೆ ಮೂಳೆ ನೋವು, ಕೂದಲು ಉದುರುವಿಕೆ, ಚರ್ಮದ ತುರಿಕೆ, ಗಮನದ ಕೊರತೆ, ಅತಿಯಾದ ಬೆವರು ಮತ್ತು ಆತಂಕದಂತಹ ವಿಚಿತ್ರ ಲಕ್ಷಣಗಳು ಸಹ ಏಕಕಾಲದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
ಬೆದರಿದ ಮಹಿಳೆ ಕೂಡಲೇ ವೈದ್ಯರನ್ನು ಭೇಟಿಯಾಗಿ MRI ಸ್ಕ್ಯಾನ್ ಮಾಡಿಸಿಕೊಂಡಿದ್ದಾಳೆ. ಎಂಆರ್‌ಐ ಸ್ಕ್ಯಾನ್‌ನ ಫಲಿತಾಂಶ ಆಕೆಯನ್ನು ದಿಗ್ಭ್ರಮೆಗೊಳಿಸಿತ್ತು. ಕಾರಣ ಟೆನ್ನಿಸ್ ಬಾಲ್ ಗಾತ್ರದ ಗಡ್ಡೆಯೇ ಕಣ್ಣಿನಲ್ಲಿ ಊತಕ್ಕೆ ಕಾರಣ ಎಂಬುದು ಸ್ಕ್ಯಾನಿಂಗ್‌ನಲ್ಲಿ ದೃಢಪಟ್ಟಿತ್ತು. ಟ್ಯೂಮರ್ ಇರುವುದು ಖಚಿತವಾಗುತ್ತಿದ್ದಂತೆ ಸತತ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ತೆಗೆದುಹಾಕಲಾಗಿದೆ.
ಮಹಿಳೆಯ ಕಣ್ಣಿನೊಳಗೆ ಗಡ್ಡೆ ಬೆಳೆದಿತ್ತು. ಆಪ್ಟಿಕ್ ನರವನ್ನು ಸ್ಪರ್ಶಿಸದೇ ಇದ್ದಿದ್ದರಿಂದ ಆಕೆಯ ದೃಷ್ಟಿ ಇನ್ನೂ ಹೋಗಿರಲಿಲ್ಲ. ಟ್ಯೂಮರ್ ತಲೆಬುರುಡೆಯೊಳಗೆ ವಿಸ್ತರಿಸಿತ್ತು. ಗಡ್ಡೆಯು ತುಂಬಾ ಅಪಾಯಕಾರಿಯಾಗಿದ್ದಿದ್ದರಿಂದ ವೈದ್ಯರು ಆಕೆಯ ತಲೆಬುರುಡೆಯ 3D ಮಾದರಿಯನ್ನು ತಯಾರಿಸಿ, ಯಾವುದೇ ಅಪಾಯವಿಲ್ಲದೆ ಗಡ್ಡೆಯನ್ನು ತೆಗೆದುಹಾಕುವುದು ಹೇಗೆ ಎಂದು ಪರೀಕ್ಷಿಸಿ ನಂತರ ಆಪರೇಶನ್ ಮಾಡಿದ್ದಾರೆ.