ದೇಹದ ಬಗ್ಗೆ ಕಾಳಜಿ ವಹಿಸಿದಂತೆಯೇ ಕಣ್ಣುಗಳ ಆರೈಕೆ ಕೂಡ ಬಹಳ ಮುಖ್ಯ. ಅತಿಯಾಗಿ ಟಿವಿ, ಮೊಬೈಲ್ ವೀಕ್ಷಣೆ ಸೇರಿದಂತೆ ಅನೇಕ ಅನಾರೋಗ್ಯಕರ ಹವ್ಯಾಸಗಳಿಂದಾಗಿ ಬಹುಬೇಗನೆ ಕನ್ನಡಕ ಬರುತ್ತದೆ. ಅಷ್ಟೇ ಅಲ್ಲ ಆರಂಭದಲ್ಲಿ ಕಣ್ಣುಗಳಲ್ಲಿ ನೀರು ಬರುವುದು, ಕೆಂಪಾಗುವುದು, ಕಣ್ಣು ಡ್ರೈ ಆಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ.
ಆರಂಭದಲ್ಲೇ ಇದನ್ನು ಗಮನಿಸಿ ಚಿಕಿತ್ಸೆ ಪಡೆಯಬೇಕು, ಇಲ್ಲದೇ ಹೋದಲ್ಲಿ ಕಣ್ಣುಗಳಿಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಷ್ಟಕ್ಕೂ ಕಣ್ಣಿನಿಂದ ನೀರು ಬರುವುದೇಕೆ, ಅದಕ್ಕೆ ಚಿಕಿತ್ಸೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಕೆಲವೊಮ್ಮೆ ಕಣ್ಣುಗಳಲ್ಲಿ ಧೂಳು ಹೋದರೆ ನೀರು ಬರಲಾರಂಭಿಸುತ್ತದೆ. ಹೊಗೆ, ಈರುಳ್ಳಿ ಘಾಟು ಕೂಡ ಕಣ್ಣಲ್ಲಿ ನೀರು ಬರಲು ಕಾರಣ. ಇದಲ್ಲದೇ ಒಮ್ಮೊಮ್ಮೆ ನಿರಂತರವಾಗಿ ಕಣ್ಣುಗಳಲ್ಲಿ ನೀರು ಬರುವುದು ಯಾವುದಾದರೂ ಕಾಯಿಲೆಗಳ ಸಂಕೇತವೂ ಆಗಿರಬಹುದು.
ಕಾಂಜಂಕ್ಟಿವಿಟಿಸ್ ಸಮಸ್ಯೆ ಇದ್ದರೆ ಸಹ ಕಣ್ಣೀರು ಬರುತ್ತದೆ. ಎರಡೂ ಕಣ್ಣುಗಳಲ್ಲಿ ನೀರು ಸುರಿಯುತ್ತದೆ. ಇದರಲ್ಲಿ ಒಂದು ಅಲರ್ಜಿ ಮತ್ತು ಇನ್ನೊಂದು ವೈರಲ್. ನಿಮಗೆ ಅಲರ್ಜಿಯಾಗಿದ್ದರೆ ಕಣ್ಣಿನ ಡ್ರಾಪ್ಸ್ ಮತ್ತು ಕೋಲ್ಡ್ ಕಂಪ್ರೆಸ್ ಇದಕ್ಕೆ ಉತ್ತಮ ಪರಿಹಾರವಾಗಿದೆ. ವೈರಲ್ ಆಗಿದ್ದರೆ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಕೆಲವೊಮ್ಮೆ ಕಾಂಟ್ರಾಕ್ಟ್ ಲೆನ್ಸ್‌ಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಕಣ್ಣುಗಳಲ್ಲಿ ನೀರು ಬರುತ್ತದೆ.
ಲೆನ್ಸ್ ಧರಿಸಿದಾಗ ಕಣ್ಣುಗಳಲ್ಲಿ ಉರಿ ಮತ್ತು ಒಂದು ರೀತಿಯ ಚುಚ್ಚುವಿಕೆ ಪ್ರಾರಂಭವಾಗುತ್ತದೆ. ಹಾಗಾದಲ್ಲಿ ನೀವು ಬೆಳಗ್ಗೆ ಮತ್ತು ಸಂಜೆ ತಣ್ಣೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಬೇಕು. ಸಾಧ್ಯವಾದರೆ ರಾತ್ರಿ ಮಲಗುವ ಮುನ್ನ ಕಣ್ಣಿಗೆ ರೋಸ್ ವಾಟರ್ ಹಾಕಿಕೊಳ್ಳಿ. ಇದು ನಿಮ್ಮ ಕಣ್ಣುಗಳಿಗೆ ಆರಾಮ ನೀಡುತ್ತದೆ.