ಶ್ರೀನಗರ: ಭಯೋತ್ಪಾದಕರಿಂದ ಹತರಾದ ಶಿಕ್ಷಕಿ ರಜನಿ ಬಾಲಾ ಅವರ 13 ವರ್ಷದ ಮಗಳಿಗೆ ಬುಧವಾರ ಅಮ್ಮನಿಲ್ಲದ ಮೊದಲ ದಿನ. ಬೆಳಗ್ಗೆ ಎಬ್ಬಿಸಲು ಬಾರದ ಅಮ್ಮ, ಕೊಠಡಿ ಹೊರಗೆ ಕುಟುಂಬ ಸದಸ್ಯರ ರೋದನದ ಗದ್ದಲಕ್ಕೆ ಎಚ್ಚರವಾಗಿದ್ದಳು 13 ವರ್ಷದ ಚೆರಿ.
ಹೊರಗೆ ಬಂದ ಚೆರಿಗೆ ತಾಯಿಯನ್ನು ಬಿಳಿ ಹೊದಿಕೆಯೊಂದಿಗೆ ಮಲಗಿಸಿದ್ದು ಕಂಡಿದೆ. ಕೂಡಲೇ ಅಮ್ಮನ ಬಳಿಗೋಡಿದ ಆಕೆ, “ಅಮ್ಮಾ, ದಯವಿಟ್ಟು ಎದ್ದೇಳು, ದಯವಿಟ್ಟು ನನ್ನನ್ನು ಶಾಲೆಗೆ ಹೊರಡಿಸು. ತರಗತಿಗೆ ತಡವಾಗುತ್ತಿದೆ” ಎಂದು ಹೇಳುತ್ತಲೇ ಇದ್ದಳು. ಕಣ್ಣೀರು ಅವಳ ಕೆನ್ನೆಯ ಮೇಲಿಂದ ಜಾರಿತು.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲಪುರ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ತನ್ನ ಶಾಲೆಯ ಹೊರಗೆ ಭಯೋತ್ಪಾದಕರು ಶಿಕ್ಷಕಿ ಬಾಲಾ (36) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಭಯೋತ್ಪಾದಕರು ರಜನಿ ಬಾಲಾರನ್ನು ಹಿಂದು ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಚೆರಿ ದೊಡ್ಡವಳಲ್ಲ. ಬಾಲಾ ಅವರ ವಿದ್ಯಾರ್ಥಿಗಳು ಬಹುಪಾಲು ಮುಸ್ಲಿಮರೇ ಇದ್ದರು.
“ಪ್ರತಿದಿನ ಬೆಳಿಗ್ಗೆ, ಅಮ್ಮ ಎದ್ದೇಳುತ್ತಿದ್ದರು, ನಮಗೆ ತಿಂಡಿ ಮಾಡಿ, ಶಾಲೆಗೆ ಹೊರಡಲು ನನಗೆ ಸಹಾಯ ಮಾಡುತ್ತಿದ್ದರು. ನಂತರ ಕೆಲಸಕ್ಕೆ ಹೋಗುತ್ತಿದ್ದರು. ಅಮ್ಮ ಇಲ್ಲದ ಬದುಕನ್ನು ನಾನು ಊಹಿಸಲೂ ಸಾಧ್ಯವಿಲ್ಲ. ಅವಳು ಈಗ ಪಕ್ಕದಲ್ಲಿ ಇರುವುದಿಲ್ಲ ಎಂದು ನನಗೆ ತಿಳಿದಿದೆ” ಎನ್ನುತ್ತ ಚೆರಿ ತನ್ನ ಕಣ್ಣೀರು ಒರೆಸಲು ವ್ಯರ್ಥ ಪ್ರಯತ್ನ ಮಾಡಿದಳು.
ಬಾಲಾ ಅವರ ಅಂತ್ಯಕ್ರಿಯೆಯ ನಂತರ, ಪತಿ ರಾಜ್ ಕುಮಾರ್, “ಅವಳು ಉತ್ತಮ ಹೆಂಡತಿ, ಪ್ರೀತಿಯ ತಾಯಿ ಮತ್ತು ಕಾಳಜಿಯುಳ್ಳ ಶಿಕ್ಷಕಿಯಾಗಿದ್ದಳು. ಆಕೆಯನ್ನು ಎಲ್ಲರೂ ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು. ಆರ್ಥಿಕವಾಗಿ ಬಲವಿಲ್ಲದ ಎಷ್ಟೋ ಮಕ್ಕಳನ್ನು ಸಾಕುತ್ತಿದ್ದಳು. ಆಕೆಯನ್ನು ಭಯೋತ್ಪಾದಕರು ಏಕೆ ಕೊಂದರು ಎಂದೇ ಅರ್ಥವಾಗುತ್ತಿಲ್ಲ” ಎಂದರು.