ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೈ.ಎಸ್. ವಿ. ದತ್ತಾ ಚುನಾವಣೆ ಘೋಷಣೆಗೂ ಮುನ್ನ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು, ಪುನಃ ಜೆಡಿಎಸ್ ಸೇರ್ಪಡೆ ಮಾಡಿಕೊಂಡು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
ಪಕ್ಷಾತೀತವಾಗಿ ಎಲ್ಲರಿಗೂ ಮೆಚ್ಚುಗೆಯಾಗುವ ಅತ್ಯಂತ ಸರಳ ವ್ಯಕ್ತಿತ್ವದ ವೈ.ಎಸ್.ವಿ. ದತ್ತಾ ಈ ಚುನಾವಣೆಯಲ್ಲಿ 500 ರೂಪಾಯಿ ಬಾಂಡ್ ಪೇಪರ್ ಮೇಲೆ ಕಡೂರು ಕ್ಷೇತ್ರದ ಮತದಾರರಿಗೆ ‘ನನ್ನ ಪ್ರತಿಜ್ಞೆ – ನನ್ನ ಶಪಥ’ ಎಂದು ಅಫಿಡೆವಿಟ್ ಒಂದನ್ನು ಬರೆದು ಕೊಟ್ಟಿದ್ದು, ಇದು ನನ್ನ ಕಡೂರು ಜನರಿಗಾಗಿ ನಾನು ಮಾಡುವ ಪ್ರತಿಜ್ಞೆ ಮತ್ತು ಶಪಥ ಎಂದು ಹೇಳಿದ್ದಾರೆ.
ಈ ಬಾಂಡ್ ಪೇಪರ್ ನಲ್ಲಿ,
ನಾನು ಕಡೂರು ಕ್ಷೇತ್ರದ ಜನರಿಗೆ ಎಂದು ಕಪ್ಪು ಚುಕ್ಕೆ ತರುವುದಿಲ್ಲ.
ನಾನು ಕಡೂರು ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ. ಇದು ನನ್ನ ಸಂಕಲ್ಪ.
ನಾನು ಪಾರದರ್ಶಕ ಜನಸ್ನೇಹಿ ಆಡಳಿತ ಜೊತೆಗೆ ಯಾವುದೇ ಜಾತಿ, ಭೇದ ಭಾವ ಮಾಡುವುದಿಲ್ಲ.
ನಾನು ಕ್ಷೇತ್ರದಲ್ಲಿ ಸಾಮರಸ್ಯ, ಜಾತ್ಯಾತೀತತೆ, ಶಾಂತಿಯಿಂದ ನೆಲೆಸಲು ಕಟಿಬದ್ಧನಾಗಿದ್ದೇನೆ.
ನಾನು ರೈತರ ಕಷ್ಟಕ್ಕೆ ಸ್ಪಂದನೆ, ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು, ರೈತರಿಗೆ ಉಚಿತ ಸಾಗುವಳಿ ಚೀಟಿ ನೀಡಲು ಬದ್ಧನಾಗಿದ್ದೇನೆ ಎಂಬುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.