ಸರಿ ಸುಮಾರು ಎರಡು ದಿನಗಳ ಕಾಲ ಬಂಡೆಗಳ ನಡುವೆ ಬೆಟ್ಟದ ತುದಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯು ಇಂದು ಮುಂಜಾನೆ ಯಶಸ್ವಿಯಾಗಿದೆ. ಕೇರಳದ ಪಾಲಕ್ಕಾಡ್ನ ಮಲಂಪುಳ ಪ್ರದೇಶದಲ್ಲಿ ಈ ಘಟನೆ ಸಂಭವಿಸಿತ್ತು. ಸೇನೆಯ ತಂಡಗಳನ್ನು ರಾತ್ರಿಯಿಡೀ ಸಜ್ಜುಗೊಳಿಸಲಾಗಿದ್ದು, ಇಂದು ಮುಂಜಾನೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮಲಂಪುಳದ ಬಾಬು ಎಂಬ ವ್ಯಕ್ತಿಯು ಸೋಮವಾರದಂದು ಕಡಿದಾದ ಬೆಟ್ಟದಲ್ಲಿ ಸಿಲುಕಿಕೊಂಡಿದ್ದರು. ಇವರನ್ನು ರಕ್ಷಿಸುವಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಬಳಕೆ ಸೇರಿದಂತೆ ಸಾಕಷ್ಟು ಪ್ರಯತ್ನಗಳನ್ನು ಈಗಾಗಲೇ ಮಾಡಲಾಗಿತ್ತು. ಆದರೆ ಯಾವ ಕಾರ್ಯಾಚರಣೆಯಲ್ಲಿಯೂ ಬಾಬುವನ್ನು ರಕ್ಷಿಸುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಳಿಕ ಭಾರತೀಯ ಸೇನೆಯನ್ನು ಸ್ಥಳಕ್ಕೆ ಕರೆಯಿಸಲಾಗಿದೆ.
ಕೋಸ್ಟ್ ಗಾರ್ಡ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್ನಲ್ಲಿದ್ದ ಪೈಲಟ್, ಬಾಬು ಸಿಲುಕಿಕೊಂಡಿದ್ದ ಜಾಗದ ಸಮೀಪದಲ್ಲೇ ತೆಗೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ಸ್ಥಳಾಕೃತಿ ಸೇರಿದಂತೆ ವಿವಿಧ ಕಾರಣದಿಂದಾಗಿ ಬಾಬುವನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಕೋಸ್ಟ್ಗಾರ್ಡ್ನ ಪ್ರಯತ್ನಗಳು ವಿಫಲಗೊಂಡ ಬಳಿಕ ಎನ್ಡಿಆರ್ಎಫ್ ತಂಡವು ರಕ್ಷಣಾ ಕಾರ್ಯವನ್ನು ಆರಂಭಿಸಿತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಈ ಯುವಕನನ್ನು ರಕ್ಷಿಸಲು ಸೇನೆಯ ನೆರವು ಕೋರಿದ್ದರು.
ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ ಸೋಮವಾರದಂದು ಬಾಬು ತನ್ನ ಇಬ್ಬರು ಸ್ನೇಹಿತರ ಜೊತೆಯಲ್ಲಿ ಚೇರಾದದ ಬೆಟ್ಟದ ತುದಿಯನ್ನು ಏರಲು ನಿರ್ಧರಿಸಿದ್ದರು. ಆದರೆ ಉಳಿದ ಇಬ್ಬರು ತಮ್ಮ ಸಾಹಸವನ್ನು ಅರ್ಧಕ್ಕೆ ಕೈ ಬಿಟ್ಟಿದ್ದರು. ಬಾಬು ಮಾತ್ರ ಬೆಟ್ಟದ ತುದಿ ಏರುವುದನ್ನು ಮುಂದುವರಿಸಿದನು. ಆದರೆ ಕಾಲು ಜಾರಿ ಬಿದ್ದ ಪರಿಣಾಮ ಬಂಡೆಗಳ ನಡುವೆ ಸಿಲುಕಿಕೊಂಡಿದ್ದರು.