ದಿನಾ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿದ್ದರೆ ಒಮ್ಮೆ ಕಡಲೆಬೇಳೆಯಿಂದ ಇಡ್ಲಿ ಮಾಡಿಕೊಂಡು ಸವಿದು ನೋಡಿ. ಉದ್ದಿನಬೇಳೆ ಬದಲಾಗಿ ಕಡಲೆಬೇಳೆ ಬಳಸಿ ರುಚಿಕರವಾದ ಇಡ್ಲಿ ತಯಾರಿಸಿ ಮನೆಮಂದಿಯೆಲ್ಲಾ ತಿನ್ನಿರಿ.
150 ಗ್ರಾಂ ಕಡಲೇಬೇಳೆ, 100 ಗ್ರಾಂ-ಅಕ್ಕಿ, 2 ಹಸಿಮೆಣಸು, 1 ಟೇಬಲ್ ಸ್ಪೂನ್- ಶುಂಠಿ ತುರಿ, 2 –ಒಣ ಮೆಣಸು, ½ ಟೀ ಸ್ಪೂನ್- ಅರಿಶಿನ, 1 ಟೀ ಸ್ಪೂನ್-ಸಾಸಿವೆ, 8 ಎಸಳು-ಕರಿಬೇವು, ರುಚಿಗೆ ತಕ್ಕಷ್ಟು-ಉಪ್ಪು.
ಮೊದಲಿಗೆ ಅಕ್ಕಿ ಮತ್ತು ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಬೇರೆ ಬೇರೆಯಾಗಿ 4 ಗಂಟೆಗಳ ಕಾಲ ನೆನಸಿಡಿ. ನಂತರ ಇವೆರೆಡನ್ನು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿಟ್ಟುಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ 8 ಗಂಟೆಗಳ ಕಾಲ ಅದನ್ನು ಹಾಗೇ ಮುಚ್ಚಿಡಿ.
ನಂತರ ಒಂದು ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಅರಿಶಿನ, ಶುಂಠಿ ತುರಿ , ಚಿಕ್ಕದ್ದಾಗಿ ಕತ್ತರಿಸಿಕೊಂಡ ಒಣ ಮೆಣಸು, ಕರಿಬೇವು ಹಾಕಿ. ಸಾಸಿವೆ ಸಿಡಿದಾಗ ಇದನ್ನು ರುಬ್ಬಿಟ್ಟುಕೊಂಡ ಮಿಶ್ರಣಕ್ಕೆ ಹಾಕಿ. ನಂತರ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಿಟ್ಟನ್ನು ಇಡ್ಲಿ ತಟ್ಟೆಗೆ ಹಾಕಿ ಬೇಯಿಸಿಕೊಳ್ಳಿ. ಸಾಂಬಾರು ಅಥವಾ ಚಟ್ನಿ ಜತೆ ಈ ಇಡ್ಲಿ ಸವಿಯಿರಿ.