ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕಡಲನಗರಿ ಮಂಗಳೂರಿನಲ್ಲಿ ನಾನಾ ವಿಧಗಳ ಡ್ರಗ್ಸ್ ಜಾಲಗಳು ಪತ್ತೆಯಾಗುತ್ತಿವೆ. ಇದೀಗ ಚಾಕೋಲೆಟ್ ಮೂಲಕ ಡ್ರಗ್ಸ್ ಪೂರೈಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಾದಕ ವಸ್ತುಮಿಶ್ರಿತ ಚಾಕೋಲೆಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಹೈಲ್ಯಾಂಡ್ ಬಳಿಯ ಅಂಗಡಿಯಲ್ಲಿ ಬಾಂಗ್ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಬೆಚನ್ ಸೊನ್ನರ್ (45) ಹಾಗೂ ಮಂಗಳೂರಿನ ಮನೋಹರ್ ಶೇಟ್ (49) ಬಂಧಿತ ಆರೋಪಿಗಳು.
ಉತ್ತರಪ್ರದೇಶ ಮೂಲದ ಬೆಚನ್ ಸೊನ್ನರ್ ತನ್ನ ಗೂಡಗಂಡಿಯಲ್ಲಿ 5,500 ಮೌಲ್ಯದ ಮಹಾಶಕ್ತಿ ಮುನಕ್ಕಾ, ಬಮ್ ಬಮ್ ಮುನಕ್ಕಾ ವಟಿ, ಪವರ್ ಮುನಕ್ಕಾ ವಟಿ ಹಾಗೂ ಆನಂದ್ ಚೂರ್ಣ ಎಂಬ ಹೆಸರಿನ ಚಾಕೋಲೆಟ್ ಗಳಲ್ಲಿ ಮಾದಕ ವಸ್ತುಗಳನ್ನು ಮಿಶ್ರಣ ಮಾಡಿ ಮಾರುತ್ತಿದ್ದ.
ಇನ್ನು ಮಂಗಳೂರಿನ ಕಾರ್ ಸ್ಟ್ರೀಟ್ ಬಳಿ ಬಾಂಗ್ ಮಿಶ್ರಿತ ಚಾಕೊಲೇಟ್ ಗಳನ್ನು ಮನೋಹರ್ ಶೇಟ್ ಮಾರಾಟ ಮಾಡುತ್ತಿದ್ದ. ಈತನಿಂದ 48,000 ಮೌಲ್ಯದ ಚಾಕೋಲೇಟ್ ವಶಕ್ಕೆ ಪಡೆಯಲಾಗಿದೆ. ಎರಡೂ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಚಾಕೋಲೇಟ್ ಗಳನ್ನು ವಶಕ್ಕೆ ಪಡೆದು ಲ್ಯಾಬ್ ಗೆ ರವಾನಿಸಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.