ಅಜಿತ್ ಪವಾರ್ ಕೊಟ್ಟ ಶಾಕ್ ಗೆ ಎನ್ ಸಿ ಪಿ ಗಡಿಯಾರದ ಮುಳ್ಳುಗಳೆಲ್ಲಾ ಅಸ್ತವ್ಯಸ್ತವಾಗಿದ್ದು ಸಮಯ ಕೈಕೊಟ್ಟಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಬಣ ವೈಷಮ್ಯವು ಚುನಾವಣಾ ಆಯೋಗದ ಬಾಗಿಲನ್ನು ತಲುಪುತ್ತಿದ್ದಂತೆ, ಪಕ್ಷದ ಸಂಸ್ಥಾಪಕ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಬಂಡಾಯವೆದ್ದಿರುವುದನ್ನು ಉಲ್ಲೇಖಿಸಿ ಎನ್‌ಸಿಪಿಯ ವಿದ್ಯಾರ್ಥಿ ಘಟಕವು ದೆಹಲಿ ಕಚೇರಿಯ ಹೊರಗೆ “ಗದ್ದಾರ್” (ದೇಶದ್ರೋಹಿ) ಪೋಸ್ಟರ್ ಹಾಕಿದೆ.
ಬಾಹುಬಲಿ ಚಿತ್ರದ ದೃಶ್ಯವನ್ನು ಬಿಂಬಿಸುವ ಪೋಸ್ಟರ್ ಅನ್ನು ಹಾಕಿದ್ದು, ಅಜಿತ್ ಪವಾರ್ ರನ್ನು ಕಟ್ಟಪ್ಪನಂತೆ, ಶರದ್ ಪವಾರ್ ರನ್ನ ಬಾಹುಬಲಿಯೆಂಬಂತೆ ಬಿಂಬಿಸಲಾಗಿದೆ. ಅಜಿತ್ ಪವಾರ್ (ಕಟ್ಟಪ್ಪ) , ಶರದ್ ಪವಾರ್ ( ಅಮರೇಂದ್ರ ಬಾಹುಬಲಿ) ಅವರ ಬೆನ್ನಿಗೆ ಚೂರಿಯಿಂದ ಇರಿದಂತೆ ತೋರಿಸಲಾಗಿದೆ.
“ಇಡೀ ದೇಶವು ಒಬ್ಬರ ನಡುವೆ ಅಡಗಿರುವ ದೇಶದ್ರೋಹಿಗಳನ್ನು ನೋಡುತ್ತಿದೆ. ಅಂತಹ ಜನರನ್ನು ಸಾರ್ವಜನಿಕರು ಕ್ಷಮಿಸುವುದಿಲ್ಲ” ಎಂದು ಪೋಸ್ಟರ್ ನಲ್ಲಿ ಹೇಳಲಾಗಿದೆ. ಪೋಸ್ಟರ್ ನಲ್ಲಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಅನ್ನು ಹೋಲುವ ಸಿಲೋಟ್ ಚಿತ್ರಗಳನ್ನು ತೋರಿಸಲಾಗಿದೆ ಹೊರತು ಪೋಸ್ಟರ್‌ನಲ್ಲಿ ಯಾರ ಹೆಸರನ್ನೂ ಹಾಕಿಲ್ಲ.
ಬಾಂದ್ರಾದಲ್ಲಿ ನಡೆದ ದೊಡ್ಡ ಶಕ್ತಿ ಪ್ರದರ್ಶನದಲ್ಲಿ 31 ಶಾಸಕರ ಬೆಂಬಲವಿದೆ ಎಂದು ಅಜಿತ್ ಪವಾರ್ ಬಣ ಹೇಳಿಕೊಂಡ ಒಂದು ದಿನದ ನಂತರ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಅಜಿತ್ ಪವಾರ್ ಬಣ ಕರೆದಿದ್ದ ಸಭೆಯಲ್ಲಿ 53 ಎನ್‌ಸಿಪಿ ಶಾಸಕರ ಪೈಕಿ 31 ಶಾಸಕರು ಭಾಗವಹಿಸಿದ್ದರೆ, ಶರದ್ ಪವಾರ್ ಸಭೆಯಲ್ಲಿ 14 ಶಾಸಕರು ಉಪಸ್ಥಿತರಿದ್ದರು.
ಜುಲೈ 2 ರಂದು ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಸೇರಿಕೊಂಡ ನಂತರ ಎನ್ ಸಿ ಪಿ ವಿಭಜನೆ ಹಾದಿಯತ್ತ ಸಾಗಿದೆ.