ಶಿವಮೊಗ್ಗ: ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅನುಕೂಲ ಮಾಡಿಕೊಡುವ ಇ-ಶ್ರಮ್ ತಂತ್ರಾಂಶದಲ್ಲಿ ಜಿಲ್ಲೆಯ ಎಲ್ಲ ಅರ್ಹ ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡು ಕಾರ್ಡ್ ಪಡೆಯುವಚಿತೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ತಿಳಿಸಿದ್ದಾರೆ.
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಿಸಿ ಕಾರ್ಡ್ ವಿತರಣೆ ಮಾಡಲು ಅಗತ್ಯವಾದ ಎಲ್ಲ ಕ್ರಮ ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಎನ್.ಡಿ.ಯು.ಡಬ್ಲ್ಯು.:
ಭಾರತದಲ್ಲಿ 43.7 ಕೋಟಿ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಸಂಘಟಿತ ಕಾರ್ಮಿಕರ ಡೇಟಾಬೇಸ್‍ನ್ನು ರಚಿಸಿದ್ದು, ಅಸಂಘಟಿತ ಕಾರ್ಮಿಕರ ನೋಂದಣಿಗೆ https://eshram.gov.in/ ವೆಬ್‍ಸೈಟ್ ಬಿಡುಗಡೆ ಮಾಡಿದೆ. ಈ ಇ-ಶ್ರಮ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡರೆ ಕಾರ್ಮಿಕರು ಒಂದು ವರ್ಷಕ್ಕೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ(ಪಿಎಂ-ಎಸ್‍ಬಿವೈ)ಯಡಿ ಆಕಸ್ಮಿಕವಾಗಿ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ ರೂ. 2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ.ಗಳವರೆಗೆ ಪರಿಹಾರ ಪಡೆಯಬಹುದು.
ಈ ಡೇಟಾಬೇಸ್‍ನ ಆಧಾರದ ಮೇಲೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಚಿವಾಲಯಗಳು/ಸರ್ಕಾರಗಳು ಅನುಷ್ಠಾನಗೊಳಿಸುತ್ತಿವೆ. ಈ ಡೇಟಾಬೇಸ್ ಅಸಂಘಟಿತ ಕಾರ್ಮಿಕರಿಗೆ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸರ್ಕಾರಕ್ಕೆ ಸಹಾಯ ಮಾಡುತ್ತದೆ.
ಕಾರ್ಮಿಕ ವಲಯ:
ಅಸಂಘಟಿತ ಕಾರ್ಮಿಕ ವಲಯದಲ್ಲಿ ಮಹಾತ್ಮಾಗಾಂಧಿ ನರೇಗಾ, ಅಂಗನವಾಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಸಣ್ಣ ಮತ್ತು ಅತಿ ಸಣ್ಣ ರೈತರು, ಪಶುಸಂಗೋಪನಗಾರರು, ನೇಕಾರರು, ಬಡಗಿ ಕೆಲಸಗಾರರು, ಕ್ಷೌರಿಕರು, ಮನೆಕೆಲಸಗಾರರು, ಹೋಟೆಲ್ ಕಾರ್ಮಿಕರು, ವಲಸೆ ಕಾರ್ಮಿಕರು, ಮೆಕ್ಯಾನಿಕ್ ಕಾರ್ಮಿಕರು, ಆನ್‍ಲೈನ್ ಸೇವಾ ಕಾರ್ಮಿಕರು, ಹೋಟೆಲ್ ಕಾರ್ಮಿಕರು, ಚರ್ಮಗಾರರು, ಸಾರಿಗೆ ಕಾರ್ಮಿಕರು ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರ ಗುರುತಿಸಿರುವ ಸುಮಾರು 379 ವರ್ಗಗಳ ಕಾರ್ಮಿಕರು ಒಳಗೊಳ್ಳುತ್ತಾರೆ.
ಇ-ಶ್ರಮ್ ತಂತ್ರಾಂಶದಲ್ಲಿ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರನ್ನು ಸಾಮಾನ್ಯ ಸೇವಾ ಕೇಂದ್ರ(ಸಿಎಸ್‍ಸಿ) ಹಾಗೂ ಗ್ರಾ.ಪಂ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಉಚಿತವಾಗಿ ನೋಂದಣಿ ಮಾಡಿಸಿ ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಅಸಂಘಟಿತ ವಲಯದ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಇ-ಶ್ರಮ್ ನೋಂದಣಿ ಅರ್ಹತೆ:
16 ರಿಂದ 59 ವರ್ಷಗಳಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ ಮತ್ತು ಪಿ.ಎಫ್ ಸದಸ್ಯರಾಗಿರಬಾರದು. ಅಸಂಘಟಿತ ಕಾರ್ಮಿಕರ ವರ್ಗಗಳಲ್ಲಿ ಕೆಲಸ ಮಾಡುತ್ತಿರಬೇಕು.
ಅವಶ್ಯಕ ದಾಖಲೆಗಳು:
ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು.
ನೋಂದಣಿ ಗುರಿ:
ರಾಜ್ಯದಲ್ಲಿ 1,89,18,000 ಇ-ಶ್ರಮ್ ನೋಂದಣಿ ಗುರಿ ಹೊಂದಲಾಗಿದ್ದು ಈವರೆಗೆ 61,63,431 ಸಾಧನೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ 2,15,605 ನೋಂದಣಿ ಆಗಿದ್ದು, ಸ್ವತಃ ಕಾರ್ಮಿಕರು, ಜೊತೆಗೆ ಕಾರ್ಮಿಕರಿಗೆ ಸಂಬಂಧಿಸಿದ ಇಲಾಖೆಗಳು ಮತ್ತು ಕಾರ್ಮಿಕ ಸಂಘಟನೆಗಳು ನೋಂದಣಿ ಮಾಡಿಸಬಹುದು.
ಇ-ಶ್ರಮ್ ಯೋಜನೆಯಡಿ ಅಸಂಘಟಿತ ಕಾರ್ಮಿಕರ ನೋಂದಣಿಯ ಕುರಿತು ಅರಿವು ಮೂಡಿಸಲು ಆಟೋ ಪ್ರಚಾರ, ಪತ್ರಿಕಾ ಪ್ರಕಟಣೆ, ಗ್ರಾ.ಪಂ, ಸಿಎಸ್‍ಸಿ ಮತ್ತು ನಗರಗಳಲ್ಲಿ ನೋಂದಣಿ ಕುರಿತು ಕ್ಯಾಂಪ್‍ಗಳನ್ನು ಮಾಡಿ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡುವಂತೆ ತಿಳಿಸಿದ್ದಾರೆ.