ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಅವರಿಗಾಗಿ ಸಂಚಾರಿ ಕ್ಲಿನಿಕ್ ಗಳನ್ನು ಆರಂಭಿಸುತ್ತಿದ್ದು, ‘ಶ್ರಮಿಕ ಸಂಜೀವಿನಿ’ ಹೆಸರಿನ ಈ ಸಂಚಾರಿ ಕ್ಲಿನಿಕ್ ಗಳ ಮೂಲಕ ಕಾರ್ಮಿಕರಿದ್ದಲ್ಲಿಯೇ ತೆರಳಿ ಅವರ ಆರೋಗ್ಯ ಪರೀಕ್ಷಿಸಿ ಅಗತ್ಯ ಸಲಹೆ ನೀಡಲಾಗುತ್ತದೆ.
‘ಶ್ರಮಿಕ ಸಂಜೀವಿನಿ’ ವಾಹನಗಳಲ್ಲಿ ಸ್ಟ್ರೆಚರ್, ಬೆಡ್, ಆಕ್ಸಿಜನ್ ಪರಿಕರ, ಜೀವನಾವಶ್ಯಕ ಔಷಧ, ರೆಫ್ರಿಜರೇಟರ್, ಇಸಿಜಿ, ಕೋವಿಡ್ ಪರೀಕ್ಷಾ ಸಲಕರಣೆ ಕಿಟ್, ವೀಲ್ ಚೇರ್, ಪ್ರಯೋಗಾಲಯ ಸಲಕರಣೆ, ಸಿಬ್ಬಂದಿಗೆ ಆಸನ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ಸಲಕರಣೆಗಳು ಇರುತ್ತವೆ.
ಪ್ರತಿ ಸಂಚಾರಿ ಕ್ಲಿನಿಕ್ ಗಳಲ್ಲಿ ಓರ್ವ ವೈದ್ಯ, ನರ್ಸ್, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಎಂಎನ್ಎಂ, ಚಾಲಕ ಮತ್ತು ಸಹಾಯಕ ಸಿಬ್ಬಂದಿಯಿರಲಿದ್ದು, ಸ್ಥಳದಲ್ಲಿಯೇ ಪರೀಕ್ಷೆ ನಡೆಸಿ ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಇಎಸ್ಐ ಅಥವಾ ಉನ್ನತ ಆಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತದೆ.
ಶ್ರಮಿಕ ಸಂಜೀವಿನಿ ಸೇವೆಗಾಗಿ 155214 ಹೆಲ್ಪ್ ಲೈನ್ ಆರಂಭಿಸಲಾಗಿದ್ದು, ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆ ಜೊತೆಗೆ ಔಷಧೋಪಚಾರ ಲಭ್ಯವಾಗಲಿದೆ. ಅಲ್ಲದೆ ಸೋಮವಾರದಿಂದ ಶನಿವಾರದವರೆಗೆ ನಿಗದಿತ ಅವಧಿಯಲ್ಲಿ ನಿಗದಿತ ಪ್ರದೇಶಗಳಿಗೆ ಈ ಸಂಚಾರಿ ಕ್ಲಿನಿಕ್ ತೆರಳಲಿದೆ.