ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ವಿಶೇಷ ಯೋಜನೆ ಹಾಗೂ ಕಾರ್ಮಿಕರಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಸಮೀಕ್ಷೆ ಮಾಡಲು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಅನುಮೋದನೆ ನೀಡಲಾಗಿದೆ.
ಕಾರ್ಮಿಕರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಸರ್ವೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಕಾರ್ಮಿಕ ಕಲ್ಯಾಣ ಸುರಕ್ಷಾ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಭೆ ನಡೆದಿದ್ದು, ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ಓದಲು ವಿಶೇಷ ಯೋಜನೆ ಜಾರಿಗೊಳಿಸಿದ್ದು, ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಮಂಡಳಿ ಭರಿಸಲಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.