15 ವರ್ಷದ ವಿದ್ಯಾರ್ಥಿಯೊಬ್ಬ ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಚುರುಕುಗೊಳಿಸಿದ್ದಾರೆ. ಮೃತ ವಿದ್ಯಾರ್ಥಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆಯು ಪೂರ್ವ ದೆಹಲಿಯ ಪಾಂಡವ ನಗರದ ಸಮೀಪದ ಕಾಮನ್ವೆಲ್ತ್ ಗೇಮ್ಸ್ ಗ್ರಾಮದಲ್ಲಿ ಸಂಭವಿಸಿದೆ.
BIG BREAKING: ದೇಶಾದ್ಯಂತ ಆರೋಗ್ಯ ಸೇವೆ ಸ್ಥಗಿತಕ್ಕೆ ಕರೆ, ಪೊಲೀಸ್ ದೌರ್ಜನ್ಯಕ್ಕೆ ವೈದ್ಯರ ಆಕ್ರೋಶ
ಪೋಷಕರು ರಾತ್ರಿ ವೇಳೆ ಮಾರುಕಟ್ಟೆಗೆ ತೆರಳಿದ್ದ ಸಮಯದಲ್ಲಿ ಹುಡುಗ ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ ಎನ್ನಲಾಗಿದೆ. ಆರನೇ ಮಹಡಿಯಿಂದ ಜಿಗಿದು ನೆಲಕ್ಕೆ ಬಿದ್ದಿದ್ದ ಬಾಲಕನ ದೇಹಕ್ಕೆ ಏಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಸ್ಥಳೀಯರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಪೂರ್ವ ದೆಹಲಿಯ ಡಿಸಿಪಿ ಪ್ರಿಯಾಂಕ ಕಶ್ಯಪ್, ಬಾಲಕನ ಪೋಷಕರು ಮಯೂರ್ ವಿಹಾರ ಮಾರ್ಕೆಟ್ಗೆ ರಾತ್ರಿ 8:30ರ ಸುಮಾರಿಗೆ ತೆರಳಿದ್ದರು. ಈ ವೇಳೆ ಆತ ಮನೆಯಲ್ಲಿ ಒಬ್ಬನೇ ಇದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಈ ಕೆಲಸ ಮಾಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯರು ಹತ್ತಿರದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದ ಎಂದು ಹೇಳಿದರು.
ಬಾಲಕ ಏಕೆ ಇಂತಹ ನಿರ್ಧಾರ ಕೈಗೊಂಡಿರಬಹುದು ಎಂಬುದಕ್ಕೆ ಇನ್ನೂ ಯಾವುದೇ ಕಾರಣ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಯಾರ ಮೇಲೂ ಅನುಮಾನ ವ್ಯಕ್ತವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದು ತನಿಖೆ ನಡೆಸಿದ್ದಾರೆ.