ಕಂಪನಿಯ ಸಿಇಓ ಅಥವಾ ಬಾಸ್ ಅಂದ್ರೆ ಉದ್ಯೋಗಿಗಳಿಂದ ಅಂತರ ಕಾಯ್ದುಕೊಳ್ತಾರೆ. ತಮ್ಮ ಮೇಲೆ ನೌಕರರಿಗೆ ಭಯ ಇರಲಿ ಅನ್ನೋ ಕಾರಣಕ್ಕೆ ಅವರೊಂದಿಗೆ ಬೆರೆಯೋದಿಲ್ಲ. ಬಾಸ್ ಅಂದಾಕ್ಷಣ ಕಚೇರಿಯ ಸಿಬ್ಬಂದಿಯೆಲ್ಲ ಭಯಪಡುವಂಥ ವಾತಾವರಣವಿರುತ್ತದೆ. ಆದ್ರೆ ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮಾತ್ರ ಇದಕ್ಕೆ ತದ್ವಿರುದ್ಧ.
ಟ್ವಿಟ್ಟರ್ ಸಿಇಓ ತಾವೇ ಖುದ್ದಾಗಿ ಕಂಪನಿಯ ಉದ್ಯೋಗಿಗಳಿಗೆ ಕಾಫಿ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸರಣಿ ಸಭೆಗಳಿಗಾಗಿ ಪರಾಗ್ ಅಗರ್ವಾಲ್ ಲಂಡನ್‌ಗೆ ತೆರಳಿದ್ರು. ಈ ವೇಳೆ ಅಲ್ಲಿನ ಕಚೇರಿಯಲ್ಲಿರೋ ಉದ್ಯೋಗಿಗಳಿಗೆ ಅವರು ಕಾಫಿ ಸರ್ವ್ ಮಾಡಿದ್ದಾರೆ.
ಪರಾಗ್ ಅಗರ್ವಾಲ್ ಕಾಫಿ ಕೊಟ್ಟರೆ, ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್, ಕುಕೀಸ್ ಅನ್ನು ಹಂಚಿದ್ದಾರೆ. ಈ ವೇಳೆ ಯುಕೆ ಟ್ವಿಟರ್‌ನ ವ್ಯವಸ್ಥಾಪಕ ನಿರ್ದೇಶಕ ದಾರಾ ನಾಸರ್ ಸಹ ಉಪಸ್ಥಿತರಿದ್ದರು. ಈ ರೀತಿ ರುಚಿಯಾಗಿ ಕಾಫಿ ಮಾಡಿ ತಂದುಕೊಡುವ ಸಿಇಓ ಇದ್ದರೆ ಎಲ್ಲಾ ಉದ್ಯೋಗಿಗಳು ಇಷ್ಟಪಟ್ಟು ಕೆಲಸ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಪರಾಗ್ ಅವರ ಸರಳತೆಗೆ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಉದ್ಯಮಿ ಎಲಾನ್ ಮಸ್ಕ್ ಜೊತೆಗಿನ ಟ್ವಿಟ್ಟರ್ ಒಪ್ಪಂದದ ಹಿನ್ನೆಲೆಯಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಮೈಕ್ರೋಬ್ಲಾಗಿಂಗ್ ಸೈಟ್‌ನ ತಂಡದಲ್ಲಿ ಇತ್ತೀಚಿಗೆ ಆದ ನಾಯಕತ್ವ ಬದಲಾವಣೆಗಳನ್ನು ಸಹ ಪರಾಗ್ ವಿವರಿಸಿದ್ದಾರೆ. ಸುದೀರ್ಘವಾದ ಟ್ವಿಟ್ಟರ್ ಸಂಭಾಷಣೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಂಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಎಂದ್ರು. ಸದ್ಯಕ್ಕೆ ಎಲಾನ್ ಮಸ್ಕ್, ಟ್ವಿಟ್ಟರ್ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪದಿಂದ ಹಿಂದೆ ಸರಿದಂತಿದೆ. ಆದರೂ ಟ್ವಿಟ್ಟರ್‌ನ ಉದ್ಯೋಗಿಗಳು ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧವಿರುವಂತೆ ಪರಾಗ್ ಅಗರ್ವಾಲ್ ಕರೆ ನೀಡಿದ್ದಾರೆ.