ಕಚೇರಿ ಮುಂದೆ ಎತ್ತು ಮೂತ್ರ ವಿಸರ್ಜಿಸಿದೆ ಎಂಬ ಕಾರಣಕ್ಕೆ ರೈತನಿಗೆ ದಂಡ ವಿಧಿಸಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅಲ್ಲಿನ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ SCCL ಕಲ್ಲಿದ್ದಲು ಕಂಪನಿ ಕಚೇರಿ ಮುಂದೆ ಸುಂದರ್ ಲಾಲ್ ಎಂಬ ರೈತನಿಗೆ ಸೇರಿದ ಎತ್ತು ಮೂತ್ರ ವಿಸರ್ಜನೆ ಮಾಡಿತ್ತು ಎನ್ನಲಾಗಿದ್ದು, ಹೀಗಾಗಿ ನೂರು ರೂಪಾಯಿ ದಂಡ ಹಾಕಲಾಗಿದೆ.
ಘಟನೆಯ ವಿವರ: ರೈತ ಸುಂದರ್ ಲಾಲ್ ನಿಂದ ಭೂಮಿ ವಶಪಡಿಸಿಕೊಂಡಿದ್ದ SCCL ಕಲ್ಲಿದ್ದಲು ಕಂಪನಿ ಆತನಿಗೆ ಪರಿಹಾರ ಕೊಟ್ಟಿರಲಿಲ್ಲ. ಹೀಗಾಗಿ ಎತ್ತಿನ ಗಾಡಿ ಏರಿ ಕಚೇರಿಗೆ ಬಂದಿದ್ದ ಸುಂದರ್ ಲಾಲ್ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಇದಕ್ಕೆ ಕಂಪನಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅಷ್ಟೇ ಅಲ್ಲ, ಸುಂದರ್ ಲಾಲ್ ನನ್ನು ಯಾವುದಾದರೂ ರೀತಿಯಲ್ಲಿ ಸಿಲುಕಿಸಲು ಪ್ರಯತ್ನ ನಡೆಸಿದ್ದರು.
ಆಗ ಎತ್ತು ಮೂತ್ರ ವಿಸರ್ಜಿಸಿದ್ದು, ಇದನ್ನೇ ನೆಪ ಮಾಡಿಕೊಂಡ ಅಧಿಕಾರಿಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದ ಈ ದೃಶ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಇದೀಗ ನ್ಯಾಯಾಲಯ ನೂರು ರೂಪಾಯಿ ದಂಡ ವಿಧಿಸಿದ್ದು, ಮೂಕ ಪ್ರಾಣಿ ಎತ್ತಿಗೆ ಈ ಸ್ಥಳದಲ್ಲಿ ಮೂತ್ರ ವಿಸರ್ಜಿಸಬಾರದು ಎಂಬ ಸಂಗತಿ ಹೇಗೆ ತಿಳಿಯುತ್ತದೆ ಎಂಬ ಪ್ರಶ್ನೆ ಈಗ ರೈತ ಸುಂದರ್ ಲಾಲ್ ನದ್ದಾಗಿದೆ.