ಕಚೇರಿಯಲ್ಲಿ ಸೂಟ್-ಪೈಜಾಮ ಧರಿಸಿ ಮಿಂಚಿದ ಉದ್ಯೋಗಿಗಳು 23-05-2022 8:07AM IST / No Comments / Posted In: Latest News, Live News, International ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡಿದ್ದಾರೆ. ಮುಖಾಮುಖಿಯಾಗಿ ನಡೆಯುವ ಸಭೆಗಳಿಗಾಗಿ ಝೂಮ್ ಅಥವಾ ಮೈಕ್ರೋಸಾಫ್ಟ್ ಟೀಮ್ ಅಥವಾ ಗೂಗಲ್ ಮೀಟ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಕೆಲವರು ಆಡಿಯೋ ಮೀಟಿಂಗ್‌ಗಳನ್ನು ಮಾತ್ರ ನಡೆಸುತ್ತಿದ್ದರೂ, ಅನೇಕ ಕಂಪನಿಗಳು ನಿಯಮಿತವಾಗಿ ವಿಡಿಯೋ ಸಭೆಗಳನ್ನು ನಡೆಸುತ್ತವೆ. ಜೂಮ್ ಮೀಟಿಂಗ್‌ಗಳಿಂದ ಬ್ಲೂಪರ್‌ಗಳ ಹಲವಾರು ವೈರಲ್ ವಿಡಿಯೊಗಳನ್ನು ನೀವು ನೋಡಿರಬಹುದು. ಉದ್ಯೋಗಿಗಳು ತಾವು ವಿಡಿಯೋಗೆ ಕಾಣಿಸುವಷ್ಟು ಮಾತ್ರ ಔಪಚಾರಿಕ ಉಡುಪು ಧರಿಸಿದ್ದರೆ, ಕೆಳಗೆ ಪೈಜಾಮಾ ಅಥವಾ ಶಾರ್ಟ್ಸ್ ಗಳನ್ನು ಧರಿಸಿದ್ದಾರೆ. ಇದೀಗ ಕಂಪನಿಯೊಂದು ತನ್ನ ಉದ್ಯೋಗಿಗಳನ್ನು ‘ಜೂಮ್ ಬಟ್ಟೆಗಳನ್ನು’ ಧರಿಸಲು ಕೇಳಿಕೊಂಡಿದೆ. ಇದಕ್ಕೆ ಸ್ಪಂದಿಸಿದ ಉದ್ಯೋಗಿಗಳು ಮೇಲೆ ಔಪಚಾರಿಕ ಬಟ್ಟೆ ಧರಿಸಿದ್ರೆ, ಕೆಳಗೆ ಪೈಜಾಮ, ಕಾಲಿಗೆ ಸ್ಲಿಪ್ಪರ್ ಧರಿಸಿ ಫೋಟೋ ಕ್ಲಿಕ್ಕಿಸಿದ್ದಾರೆ. ಇದನ್ನು ಲಿಂಕ್ಡ್ ಇನ್‌ನಲ್ಲಿ ಡೇನಿಯಲ್ ಅಬ್ರಹಾಮ್ಸ್ ಅವರು ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಐವರು ಪುರುಷರು ಮತ್ತು ಇಬ್ಬರು ಮಹಿಳೆಯರು ತಮ್ಮ ಆಫೀಸ್ ರಿಸೆಪ್ಶನ್‌ನಲ್ಲಿ ತಮ್ಮ ಜೂಮ್ ಬಟ್ಟೆಗಳನ್ನು ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಎಲ್ಲಾ ಪುರುಷರು ಶರ್ಟ್, ಜಾಕೆಟ್ ಮತ್ತು ಟೈನೊಂದಿಗೆ ಸೂಟ್‌ಗಳನ್ನು ಧರಿಸಿದ್ದರೆ, ಪ್ಯಾಂಟ್‌ಗಳ ಬದಲಿಗೆ ಶಾರ್ಟ್ಸ್ ಅಥವಾ ಪೈಜಾಮಾವನ್ನು ಧರಿಸಿದ್ದರು. ಇಬ್ಬರು ಮಹಿಳೆಯರು ಸ್ಕರ್ಟ್‌ಗಳು ಅಥವಾ ಪ್ಯಾಂಟ್‌ಗಳ ಬದಲಿಗೆ ಫಾರ್ಮಲ್ ಶರ್ಟ್‌ಗಳು ಮತ್ತು ಪೈಜಾಮಾಗಳನ್ನು ಧರಿಸಿದ್ದರು. ಮಹಿಳೆಯರು ಔಪಚಾರಿಕ ಹೀಲ್ಸ್ ಅಥವಾ ಸ್ಯಾಂಡಲ್‌ಗಳ ಬದಲಿಗೆ ಮಾಮೂಲಿ ಚಪ್ಪಲಿಗಳನ್ನು ಧರಿಸಿದ್ದರು. ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಉಲ್ಲಾಸದಾಯಕವಾಗಿ ಕಂಡುಕೊಂಡಿದ್ದಾರೆ.